ಮಡಿಕೇರಿ, ಅ.7: ಕೊಡಗಿನ ಕೆಲವೆಡೆ ಸಂಭವಿಸಿರುವ ಪ್ರಾಕೃತಿಕ ವಿಕೋಪದ ಕರಾಳಛಾಯೆಯು, ಪ್ರಸಕ್ತ ವರ್ಷದಲ್ಲಿ ಮಡಿಕೇರಿ ದಸರಾ ನಾಡಹಬ್ಬದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದಂತಿದೆ. ಹಾಗಾಗಿಯೇ ರಾಜ ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಐತಿಹಾಸಿಕ ನವರಾತ್ರಿ ಉತ್ಸವಕ್ಕೆ ಇನ್ನು ಕೇವಲ 2 ದಿನಗಳ ಬಾಕಿಯಿದ್ದರೂ, ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾರದ ಗೊಂದಲಮಯ ಸ್ಥಿತಿಯಲ್ಲಿ ತಾ 8 ರಂದು (ಇಂದು) ದಸರಾ ಸಮಿತಿಯ ಸಭೆ ನಡೆದು ಎಲ್ಲವೂ ನಿರ್ಧಾರವಾಗಲಿದೆ.ಈ ತನಕ ಮಡಿಕೇರಿ ದಸರಾ ಆಚರಣೆ ಸಂಬಂಧ ಸಭೆಗಳನ್ನು ನಡೆಸಲಾಗಿದ್ದರೂ, ಯಾವದೇ ನಿರ್ದಿಷ್ಟ ತೀರ್ಮಾನ ಸಾಧ್ಯವಾಗಿಲ್ಲ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಉಪಸ್ಥಿತಿಯಲ್ಲಿ ಇಂದಿನ ಸಭೆಯಲ್ಲಿ ದಸರಾ ಕಾರ್ಯಕ್ರಮ ಸ್ವರೂಪ ಹೇಗೆಂದು ನಿರ್ಧರಿಸಲಾಗುತ್ತದೆ.ಹಿಂದೆಂದೂ ಮಡಿಕೇರಿ ದಸರಾ ಆಚರಣೆಗೆ ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿರಲಿಲ್ಲ. ಸಾಕಷ್ಟು ಮುಂಚಿತವಾಗಿಯೇ ಪೂರ್ವ ತಯಾರಿಯೊಂದಿಗೆ, ದಸರಾ ಮಂಟಪೋತ್ಸವ ಸಹಿತ ನವರಾತ್ರಿಯ ಸಾಂಸ್ಕøತಿಕ ಚಟುವಟಿಕೆ, ಕ್ರೀಡೆ, ಕವಿಗೋಷ್ಠಿ ಸಹಿತ ವಿಭಿನ್ನ ಕಾರ್ಯಕ್ರಮಗಳೊಂದಿಗೆ, ಈಚೆಗೆ ಮಕ್ಕಳ ದಸರಾ, ಮಹಿಳಾ ದಸರಾ ಮುಂತಾದ ವಿನೂತನ ಯೋಜನೆ ಗಳು ಸೇರ್ಪಡೆಗೊಂಡಿದ್ದವು.

ಬಾರದ ನೆರವು : ವರುಷಗಳು ಉರುಳಿದಂತೆ ವಿಶ್ವವಿಖ್ಯಾತ ಮೈಸೂರು ದಸರಾದೊಂದಿಗೆ, ಮಡಿಕೇರಿ ದಸರಾ ಆಚರಣೆ ಕೂಡ ವ್ಯಾಪಕ ಪ್ರಚಾರ ಪಡೆಯುತ್ತಾ, ಜನಸಾಗರವನ್ನು ಆಕರ್ಷಿಸುವಂತಾಗಿತ್ತು; ರಾಜ್ಯ ಸರಕಾರವು ಕೂಡ ವರ್ಷದಿಂದ ವರ್ಷಕ್ಕೆ ಅನುದಾನ ಕೂಡ ಹೆಚ್ಚಿಸಿತ್ತು. ಒಂದೆಡೆ ದಾನಿಗಳ ಸಹಕಾರ ಹಾಗೂ ಸರಕಾರದಿಂದ ನೆರವಿನ ಮೂಲಕ ದಸರಾ ವೈಭವವನ್ನು ಅತ್ಯಾಕರ್ಷಕಗೊಳಿಸುವ ಪ್ರಯತ್ನವೂ ಸಾಗಿತ್ತು. ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಈ ಬಾರಿಯ ದಸರಾ ನಾಡಹಬ್ಬಕ್ಕೆ ಬಿಡಿಗಾಸು ಕೂಡ ಸರಕಾರದಿಂದ ಇನ್ನೂ ಬಂದಿಲ್ಲ.

ಅದುವೇ ಆಸರೆ: ಕಳೆದ ಮೂರ್ನಾಲ್ಕು ತಿಂಗಳು ಸುರಿದ ಧಾರಕಾರ ಮಳೆಯೊಂದಿಗೆ ಸಾಲು ಸಾಲು ಭೂಕುಸಿತದಿಂದ ಎದುರಾಗಿ ರುವ ಜೀವ ಹಾನಿ, ಮನೆ ಮಠಗಳು ನೆಲಕಚ್ಚಿದ ಪರಿಣಾಮ ಈ ಭಾರಿ ದಸರಾ ಸಲುವಾಗಿ ಸಾರ್ವಜನಿಕ ವಂತಿಗೆ ಪಡೆಯದಿರಲು ನಿರ್ಧರಿಸಿದ್ದು, ಸರಕಾರದ ಅನುದಾನವನ್ನೇ ಇಲ್ಲಿ ಆಶ್ರಯಿಸುವಂತಾಗಿದೆ. ಹೀಗಾಗಿ ಇಂದು ಉಸ್ತುವಾರಿ ಸಚಿವರ ನಿರ್ಧಾರದ ಮೇಲೆ ದಸರಾ ಕಾರ್ಯ ಕ್ರಮ ಆಯೋಜಿಸುವಂತಾಗಿದೆ.

ಕರಗ ನಿಶ್ಚಯ : ನಗರದ ದಶಮಂಟಪೋತ್ಸವ ಸಂಪ್ರದಾಯ ಬದ್ಧವಾಗಿಯೇ ನಡೆಯಲಿದೆ ಎಂದು ಪ್ರಕಟಿಸಿರುವ ದಶಮಂಟಪ ಸಮಿತಿ, ಸರಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವವನ್ನು, ರಾಜ ಮಹಾರಾಜರ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಪರಂಪರೆಯನ್ನೇ ಮುಂದುವರೆಸು ವದಾಗಿ ಆಯ ದೇವಾಲಯ ಸಮಿತಿ ಸ್ಪಷ್ಟಪಡಿಸಿವೆ.

ಪೂರ್ವ ಸಿದ್ಧತೆ : ಬುಧವಾರ ಬೆಳಿಗ್ಗೆ ಸಂಪ್ರದಾಯದಂತೆ ನಾಲ್ಕು ಶಕ್ತಿ ದೇವಾಲಯಗಳಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ಮುತ್ತುಮಾರಿಯಮ್ಮ (ಕಂಚಿ ಕಾಮಾಕ್ಷಿ) ಹಾಗೂ ದಂಡಿನ ಮಾರಿಯಮ್ಮ ಸನ್ನಿಧಿಗಳಲ್ಲಿ ವಿಶೇಷ ಪೂಜೆಯೊಂದಿಗೆ ಮಧ್ಯಾಹ್ನ ಪಂಪಿನಕೆರೆ ತಟಕ್ಕೆ ತೆರಳಿ ಕರಗ ಉತ್ಸವಕ್ಕೆ ಶಕ್ತಿ ದೇವತೆಗಳನ್ನು ಅಣಿಗೊಳಿಸಲಾಗುತ್ತದೆ.

ಎಲ್ಲಾ ಪೂರ್ವ ಸಿದ್ಧತೆಗಳೊಂದಿಗೆ

(ಮೊದಲ ಪುಟದಿಂದ) ಸಂಜೆಗತ್ತಲೆಯ ನಡುವೆ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭಗೊಳ್ಳಲಿದ್ದು, ರಾಜಬೀದಿಗಳಲ್ಲಿ ಸಂಚರಿಸಿ ಪೇಟೆ ಶ್ರೀ ರಾಮ ಮಂದಿರದಲ್ಲಿ ಸಂಗಮಗೊಂಡು ತಡರಾತ್ರಿ ಆಯಾ ಸನ್ನಿಧಿಗಳನ್ನು ಸೇರಲಿವೆ. ಅಲ್ಲಿಂದ ಮೂರು ದಿನಗಳ ತನಕ ಹಾಗೂ ಒಂದೆರಡು ಕರಗಗಳು ಐದು ದಿನ ನಗರ ಪ್ರದಕ್ಷಿಣೆ ತೆರಳಲಿವೆ. ಈ ದಿಸೆಯಲ್ಲಿ ಈಗಾಗಲೇ ದೇವಿ ಸನ್ನಿಧಿಗಳಿಗೆ ಬಣ್ಣ ಬಳಿಯುವದರೊಂದಿಗೆ, ಸಕಲ ತಯಾರಿ ನಡೆದಿದ್ದು, ನಾಡಿನ ಸುರಕ್ಷತೆ, ಜನತೆಯ ನೆಮ್ಮದಿಯೊಂದಿಗೆ ರೋಗ, ರುಜಿನಗಳು ಹರಡದಂತೆ ಕರಗ ದೇವತೆಗಳಲ್ಲಿ ನಂಬಿಕೆ ಇರಿಸಿಕೊಂಡು ಪರಂಪರಾಗತ ಆಚರಣೆ ಮುಂದುವರೆಸುವದಾಗಿ ದೇವಾಲಯಗಳ ಪ್ರಮುಖರು ಖಚಿತಪಡಿಸಿದ್ದಾರೆ.

ಅಲ್ಲದೆ ನವರಾತ್ರಿಯ ಆರಂಭದಿಂದ ವಿಜಯದಶಮಿ ರಾತ್ರಿ ಉತ್ಸವದೊಂದಿಗೆ, ಮರುದಿನ ಮುಂಜಾವಿನಲ್ಲಿ ಬನ್ನಿ ಕಡಿಯುವದು ಸೇರಿದಂತೆ ಅನಂತರದಲ್ಲಿ ನಾಲ್ಕು ಸನ್ನಿಧಿಗಳಲ್ಲಿ ಮೂರು ದಿನ ಅಥವಾ ಐದು ದಿನಗಳಲ್ಲಿ ಏರ್ಪಡಿಸುವ ಕುಂಭಪೂಜೆಯೊಂದಿಗೆ, ಸಂಪ್ರದಾಯ ಬದ್ಧ ಆಚರಣೆಗೆ ತೆರೆ ಬೀಳಲಿರುವದಾಗಿ ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ದಸರಾ ಮಂಟಪೋತ್ಸವಗಳು ಸಂಪ್ರದಾಯದಂತೆ ವಿಜಯದಶಮಿ ರಾತ್ರಿ ವೈಭವದಿಂದಲೇ ನಡೆಯಲಿದ್ದು, ಯಾವದೇ ಕಾರಣಕ್ಕೂ ಸಂಪ್ರದಾಯ ಮುರಿಯುವದಿಲ್ಲವೆಂದು ಆಯಾ ಪ್ರಮುಖರು ಸುಳಿವು ನೀಡಿದ್ದಾರೆ. ಹೀಗಾಗಿ ಇಂದು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖ ದಸರಾ ಸಮಿತಿ ಸಭೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

- ಶ್ರೀಸುತ