ಗೋಣಿಕೊಪ್ಪ ವರದಿ, ಅ. 7: ಕಳೆದುಕೊಂಡಿರುವದನ್ನು ನೆನೆಸಿ ಕೊಂಡು ಭವಿಷ್ಯ ಕಳೆದು ಕೊಳ್ಳುವದಕ್ಕಿಂತ ಆತ್ಮವಿಶ್ವಾಸದಿಂದ ಕೊಡಗಿನ ಪರಿಸರ ಉಳಿಸಿಕೊಂಡು ಬದುಕು ಸಾಗಿಸುವಂತಾಗಬೇಕು ಎಂಬ ಸಂದೇಶವನ್ನು ಮ್ಯಾಜಿಕ್ ಮಾಂತ್ರಿಕ ಮೈಸೂರಿನ ರಾಜ್‍ಭಟ್ ಮ್ಯಾಜಿಕ್ ಮೂಲಕ ಅನಾವರಣ ಗೊಳಿಸಿ ಸಂತ್ರಸ್ತ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬಿಸಿದರು.

ಭೂಕುಸಿತಕ್ಕೆ ಒಳಗಾಗಿ ಬದುಕು ಕಳೆದುಕೊಂಡು ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಆತ್ಮ ವಿಶ್ವಾಸ ಮೂಡಿಸಲು ಕಕೂನ್ ರೆಸ್ಟೋರೆಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮ್ಯಾಜಿಕ್ ಮೂಲಕ ಅತ್ಮವಿಶ್ವಾಸ ತುಂಬಿಸುವ ಪ್ರಯತ್ನ ಮಾಡಿದರು.

ಕಳೆದುಕೊಂಡಿರುವ ಆಸ್ತಿಯನ್ನು ಮರಳಿ ಪಡೆಯಲು ಆಗದಿದ್ದರೂ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಕೊಡಗಿನ ಪ್ರಕೃತಿ ರಕ್ಷಣೆ ಮುಖ್ಯ, ಅಜ್ಞಾನದಿಂದ ಹೊರ ಬಂದು, ವಿಜ್ಞಾನದ ಮೂಲಕ ಬದುಕು ಸಾಗಿಸುವಂತಾಗಬೇಕು. ಪರಿಸರ ದಲ್ಲಿರುವ ಪ್ರತೀ ಜೀವಸಂಕುಲ ಅರಣ್ಯ, ಇವುಗಳ ಜತೆ ಬದುಕು ಸಾಗಿಸಬೇಕು ಎಂದು ಮ್ಯಾಜಿಕ್ ಮೂಲಕ ಮಾಹಿತಿ ನೀಡಿದರು. ಕಾವೇರಿ ಒಡಲು ಬತ್ತದಂತೆ ನೋಡಿಕೊಳ್ಳಬೇಕಿದೆ ಎಂಬವದನ್ನು ಕಾವೇರಿ ಮಾತೆ ಕಂಕುಳಿನಿಂದ ಬಿಂದಿಗೆ ಮೂಲಕ ನೀರು ಬೀಳುವ ಮ್ಯಾಜಿಕ್ ತೋರಿಸಲಾಯಿತು. ಪರಿಸರ ರಕ್ಷಣೆ ಮೂಲಕ ಕಾವೇರಿ ನೀರು ಉಳಿಸಿ ಕೊಳ್ಳಬೇಕು. ಅದನ್ನು ಕಳೆದುಕೊಳ್ಳಲು ಅಜ್ಞಾನಕ್ಕೆ ಇಳಿಯ ಬಾರದು ಎಂಬ ಸಂದೇಶವನ್ನು ನೀಡಿದರು.

ಪರಿಸರ ಅಸಮತೋಲನಕ್ಕೆ ಮಾನವರ ಅಟ್ಟಹಾಸ, ನೀರಿನ ರಕ್ಷಣೆಗೆ ಯಾವ ರೀತಿ ಪರಿಸರ ಕಾಳಜಿ ಬೇಕು ಎಂಬದನ್ನು ಮನವರಿಕೆ ಮಾಡಿಕೊಟ್ಟರು. ಆಸ್ತಿ, ಮನೆ, ಮಠಗಳನ್ನು ಮುತ್ತಿನಂತೆ ಕಳೆದುಕೊಂಡಿದ್ದರೂ ಕೂಡ ಮರಳಿ ಪಡೆಯಲು ಅವಕಾಶವಿದೆ. ಬದುಕು ಉಳಿಸಿಕೊಂಡರೆ, ಮತ್ತೆ ಉತ್ತಮ ಭವಿಷ್ಯ ಕಟ್ಟಲು ಸಾಧ್ಯವಿದೆ ಎಂಬದನ್ನು ಮನಮುಟ್ಟುವಂತೆ ಹೇಳಿಕೊಟ್ಟರು.ಮಕ್ಕಳಿಂದ ಹಾಡು-ಮಿಮಿಕ್ರಿ ಸಂಭ್ರಮ

ಸಂತ್ರಸ್ತ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೋವು ಮರೆತರು. ಮೋನಿಕಾ, ಕಾವೇರಪ್ಪ, ವರ್ಷ, ಬೆಳ್ಯಪ್ಪ, ವರುಣ್, ನಾಚಪ್ಪ ಹಾಡು ಹಾಡಿ ರಂಜಿಸಿದರು. ತರುಣ್, ಅಕ್ಷಯ್ ಪೊನ್ನಪ್ಪ, ಗಗನ್, ಪುಲಕೇಶಿ ಇವರುಗಳು ಮಿಮಿಕ್ರಿ ಮೂಲಕ ಸಂಭ್ರಮಿಸಿದರು. ಸ್ಪರ್ಧಿಗಳಿಗೆ ಕಕೂನ್ ರೆಸ್ಟೋರೆಂಟ್ ಮುಖ್ಯಸ್ಥರುಗಳಾದ ಪೊನ್ನಿಮಾಡ ಸುರೇಶ್, ಪೊನ್ನಿಮಾಡ ಪೊನ್ನಣ್ಣ, ಕರ್ತಮಾಡ ವಿವೇಕ್ ಬಹುಮಾನ ವಿತರಿಸಿದರು. ನಂತರ ಸಹ ಬೋಜನದ ಮೂಲಕ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿದರು. ಸಾಯಿಶಂಕರ್ ಶಾಲೆಯ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

-ಸುದ್ದಿಪುತ್ರ