ಶ್ರೀಮಂಗಲ, ಅ. 7: ವೀರಾಜಪೇಟೆ ತಾಲೂಕಿನ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಹಾಗೂ ಭಾರೀ ಗಾಳಿಯಿಂದ ಕಾಫಿ, ಕರಿಮೆಣಸು, ಅಡಿಕೆ, ಸೇರಿದಂತೆ ಭತ್ತದ ಬೆಳೆಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಈಗಾಗಲೇ ನಷ್ಟದ ಸಮೀಕ್ಷೆ ನಡೆಸಲಾಗಿದ್ದು, ತಕ್ಷಣವೇ ಪರಿಹಾರವನ್ನು ಜಿಲ್ಲಾಡಳಿತ ನೀಡಬೇಕೆಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾ.ಪಂ. ವ್ಯಾಪ್ತಿಯ ಬಿರುನಾಣಿ, ತೆರಾಲು, ಪರಕಟಗೇರಿ, ಪೊರಾಡು ಮತ್ತು ಬಾಡಗರಕೇರಿ ವ್ಯಾಪ್ತಿಯಲ್ಲಿ 200 ಇಂಚಿಗೂ ಅಧಿಕ ಮಳೆಯಾಗಿದ್ದು, ಗ್ರಾ.ಪಂ. ವ್ಯಾಪ್ತಿಯ ಕೆಲವು ಭಾಗಗಳಲ್ಲಿ 250 ರಿಂದ 280 ಇಂಚು ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ಜನರು ಕೃಷಿ ಹಾಗೂ ತೋಟಗಾರಿಕೆಯನ್ನೇ ತನ್ನ ಜೀವನಾಧಾರಕ್ಕೆ ಅವಲಂಭಿಸಿದ್ದು, ಬಹುತೇಕ ಎಲ್ಲಾ ಬೆಳೆಗಳು ನೆಲಕಚ್ಚಿವೆ. ಆದ್ದರಿಂದ ಜಿಲ್ಲಾಡಳಿತ ಈ ವ್ಯಾಪ್ತಿಯ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕೂಡಲೇ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ರೈತರು ಹಾಗೂ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ವಸೂಲಾತಿಗೆ ಮುಂದಾಗಬಾರದು, ಈ ವ್ಯಾಪ್ತಿಯ ಹಲವು ಬ್ಯಾಂಕ್‍ಗಳು ಇಲ್ಲಿನ ಸಂಕಷ್ಟದ ಅರಿವಿದ್ದರೂ ಸಹ ರೈತರ ಮನೆ ಮನೆಗೆ ತೆರಳಿ ಸಾಲ ಕಟ್ಟುವಂತೆ ಒತ್ತಾಯಿಸುತ್ತಿರುವ ಕೆಲವು ಪ್ರಕರಣಗಳು ನಡೆದಿದ್ದು, ಇಂತಹ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕು. ಈ ವ್ಯಾಪ್ತಿಯ ರೈತರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿಲ್ಲ. ಆದ್ದರಿಂದ ಸರಕಾರ ಬೆಳೆಗಾರರ ಸಾಲ ಮನ್ನ ಮಾಡಲು ತ್ವರಿತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್‍ಗಳಿಗೆ ಸುತ್ತೋಲೆಗಳನ್ನು ರವಾನಿಸಬೇಕು. ಈ ಬಗ್ಗೆ ಜಿಲ್ಲಾಡಳಿವು ರೈತರ ಸಂಕಷ್ಟ ಅರಿತು ಸರಕಾರಕ್ಕೆ ತುರ್ತಾಗಿ ವರದಿ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.