ಮಡಿಕೇರಿ, ಅ. 6: ಇಲ್ಲಿಗೆ ಸಮೀಪದ ಬಿ.ಸಿ. ಪ್ರೌಢಶಾಲೆ ದೇವಣಗೇರಿ ಯಲ್ಲಿ ಶಾಲಾ ಒಕ್ಕೂಟದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶಾಲಾ ಅಧ್ಯಕ್ಷ ಸುನಿಲ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಟ್ಟಡ ಪೂವಣ್ಣ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಬಗ್ಗೆ ಹಾಗೂ ಪ್ರಸ್ತುತ ರಾಜ್ಯ ಮತ್ತು ರಾಷ್ಟ್ರಮಟ್ಟದ ಘಟನಾವಳಿಯ ಬಗ್ಗೆ ಅರಿವು ಇರಬೇಕು ಎಂದು ತಿಳಿಸಿದರು. ಅತಿಥಿ, ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸಣ್ಣವಂಡ ಬೀನ ಮಾತನಾಡಿ, ಸ್ವಯಂ ಸೇವೆ, ಸ್ವಯಂ ಶಿಸ್ತು, ಸ್ವಯಂ ಮೌಲ್ಯ ಮಾಪನಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸುನಿಲ್ ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಳ್ಳಬೇಕು, ಜೊತೆಗೆ 10ನೇ ತರಗತಿ ತೇರ್ಗಡೆ ನಂತರ ವಿದ್ಯಾಭ್ಯಾಸವನ್ನು ಮುಂದುವರೆಸಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹಿತವಚನ ನುಡಿದರು. ಶಾಲಾ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್, ವಿದ್ಯಾರ್ಥಿಗಳ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದಂಡ ಜಿ. ಪೊನ್ನಪ್ಪ, ಶಾಲಾ ಕಾರ್ಯನಿರ್ವಾಹಕಿ ಕರ್ನಂಡ ಎನ್. ಬೊಳ್ಳಮ್ಮ, ಖಜಾಂಚಿ ಅಲ್ಲಪಂಡ ದಾದಾ ಉತ್ತಪ್ಪ, ಆಡಳಿತಾಧಿಕಾರಿ ಪಿ.ಎ. ಲಕ್ಷ್ಮಿನಾರಾಯಣ, ಆಡಳಿತ ಮಂಡಳಿಯ ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ, ಬೀನಂಡ ಎಸ್. ಪೂಣಚ್ಚ, ಚಾರಿಮಂಡ ಎಂ. ಮುತ್ತಪ್ಪ, ಪುಗ್ಗೇರ ನಂದ ಗಣಪತಿ ಹಾಜರಿದ್ದರು. ಮುಖ್ಯ ಶಿಕ್ಷಕಿ ವೈ. ಪ್ರಮೀಳಾ ಕುಮಾರಿ ನಿರೂಪಿಸಿ, ಎಸ್. ನಂದಿನಿ ವಂದಿಸಿದರು.