ಗೋಣಿಕೊಪ್ಪ ವರದಿ, ಅ. 6: ಸರಳ ಅಥವಾ ಅದ್ಧೂರಿಯಾಗಿ ನಡೆಯಲಿರುವ ಗೋಣಿಕೊಪ್ಪ ದಸರಾ ಸಂದರ್ಭ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಮುಂಜಾಗೃತಾ ಕ್ರಮ ವಹಿಸಲಿದೆ ಎಂದು ಡಿವೈಎಸ್‍ಪಿ ನಾಗಪ್ಪ ಹೇಳಿದರು.

ಇಲ್ಲಿನ ಕೂರ್ಗ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ದಸರಾ ಪ್ರಯುಕ್ತ ಪೂರ್ವಭಾವಿ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಇಲ್ಲಿವರೆಗೆ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ದಸರಾ ಆಚರಣೆ ಸರಳವೋ, ಅದ್ಧೂರಿಯೋ ಎಂಬವದು ನಿರ್ಧಾರವಾಗಿಲ್ಲ. ಆದರೆ, ದಸರಾ ಆಚರಣೆಗೆ ಎಲ್ಲಾ ರೀತಿಯ ಮುಂಜಾಗೃತಾ ಹಾಗೂ ಭಧ್ರತಾ ಕ್ರಮಕ್ಕೆ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಕಾನೂನು ಪಾಲನೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಎಲ್ಲಿಯೂ ಕೂಡ ಡಿಜೆ ಬಳಕೆ ಮಾಡುವಂತಿಲ್ಲ. ಸುಪ್ರಿಂ ಕೋರ್ಟ್ ಆದೇಶವನ್ನು ಸರ್ವರೂ ಪಾಲಿಸ ಬೇಕಿದೆ. ಡಿಜೆ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ಎಚ್ಚರಿಕೆ ನೀಡಿದರು.

ದಸರಾ ದಿನದಂದು ಪಾರ್ಕಿಂಗ್ ಸ್ಥಳದಿಂದ ಪಟ್ಟಣಕ್ಕೆ ಬರುವ ಕಲಾ ಪ್ರಿಯರಿಗೆ ನಡೆದುಕೊಂಡು ಬರುವದು ಕಷ್ಟ, ಸರ್ಕಾರಿ ಬಸ್ ಅಥವಾ ಆಟೋಗಳ ನಿಯೋಜನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಇದರಂತೆ ಕ್ರಮಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವದು ಎಂದು ನಾಗಪ್ಪ ಹೇಳಿದರು.

ಶ್ರೀ ಕಾವೇರಿ ದಸರಾ ಸಮಿತಿಯ ಕಳೆದ ಬಾರಿಯ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಸರ್ಕಾರ ನೀಡುವ ಅನುದಾನದಂತೆ ಆಚರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವದು. ಸೋಮವಾರ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಜಿಲ್ಲಾಧಿಕಾರಿ ಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ. ನಂತರ ದಸರಾ ಆಚರಣೆ ಹೇಗೆ ಎಂಬ ಬಗ್ಗೆ ನಿರ್ಧರಿಸಲಾಗುವದು. ಚಾಮುಂಡೇಶ್ವರಿ ಪೂಜೆ ಹಾಗೂ ಮಕ್ಕಳಿಗೆ ಸಣ್ಣ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.

ದಸರಾ ಆಚರಣೆ ಬಗ್ಗೆ ಘೋಷಣೆಯಾಗದಿರುವದರಿಂದ ಪೂರ್ವಸಿದ್ಧತೆಗೆ ತೊಂದರೆಯಾಗಿದೆ ಎಂದು ಮಂಟಪ ಸಮಿತಿಯ ಪದಾಧಿಕಾರಿಗಳು ಅವಲತ್ತುಕೊಂಡರು.

ಈ ಸಂದರ್ಭ ಕಾಡ್ಲಯ್ಯಪ್ಪ ದಸರ ಸಮಿತಿ ಅಧ್ಯಕ್ಷ ಸಜನ್ ಚೆಂಗಪ್ಪ, ನಮ್ಮ ದಸರಾ ಸಮಿತಿ ಅಧ್ಯಕ್ಷ ಸೋಮಣ್ಣ, ನಾಡಹಬ್ಬ ಸಮಿತಿಯ ಕಾವೇರಪ್ಪ, ಯುವ ದಸರಾ ಸಮಿತಿಯ ವಿನೋದ್, ನವಚೇತನ ಸಮಿತಿಯ ಕರ್ಣರಾಜ್, ಭಗವತಿ ಸಮಿತಿಯ ಜಮ್ಮಡ ಅರಸು ಹಾಗೂ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂದÀರ್ಭ ವೃತ್ತ ನಿರೀಕ್ಷಕ ದಿವಾಕರ್, ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಉಪಸ್ಥಿತರಿದ್ದರು.