ಮಡಿಕೇರಿ, ಅ.5 : ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ನಗರವೇ ಶುಚಿತ್ವದಿಂದ ಕೂಡಿರುತ್ತದೆ. ಆ ನಿಟ್ಟಿನಲ್ಲಿ ಮನಸ್ಸು ಮಾಡುವಂತಾಗ ಬೇಕು ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಗರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನೆಯ ಸುತ್ತಮುತ್ತ ಹಾಗೂ ರಸ್ತೆ ಬದಿ ಸ್ವಚ್ಛವಾಗಿ ಇಟ್ಟುಕೊಂಡಾಗ, ನಗರದ ಸೌಂದರ್ಯ ಕಾಪಾಡ ಬಹುದು. ಆ ನಿಟ್ಟಿನಲ್ಲಿ ಪೌರಕಾರ್ಮಿ ಕರ ಕೆಲಸದ ಒತ್ತಡವು ಕಡಿಮೆಯಾಗಲಿದೆ ಎಂದು ನುಡಿದರು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತಾಗಲು ಎಲ್ಲರೂ ಕೈಜೋಡಿಸುವಂತಾಗಬೇಕು ಎಂದರು.
ನಗರಸಭಾ ಸದಸ್ಯ ಪಿ.ಡಿ.ಪೊನ್ನಪ್ಪ ಮಾತನಾಡಿ ಸ್ವಚ್ಛತೆ ಎಂಬದು ಮನಸ್ಸಿನಿಂದ ಬರಬೇಕು. ಸಿಂಗಾಪುರ, ಅಮೇರಿಕ ಮತ್ತಿತರ ರಾಷ್ಟ್ರಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿರಬೇಕಾದರೆ, ನಮ್ಮ ದೇಶದಲ್ಲಿ ಯಾಕೆ ಆಗುವದಿಲ್ಲ? ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಶಾಲೆಗಳಲ್ಲಿ ಸ್ವಚ್ಛತೆ ಸಂಬಂಧ ವಾರದಲ್ಲಿ ಒಂದು ದಿನವಾದರೂ ಪಾಠ ಮಾಡುವಂತಾಗಬೇಕು. ಪರಿಸರ ಶುಚಿತ್ವ ಮತ್ತು ಸ್ವಚ್ಛತೆ ಬಗ್ಗೆ ಪಠ್ಯ ಅಳವಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಪೌರಾಯುಕ್ತ ರಮೇಶ್ ಮಾತನಾಡಿ ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಇಡೀ ನಗರ ಶುಚಿತ್ವ ಮತ್ತು ಸ್ವಚ್ಛತೆ ಮಾಡುತ್ತಾರೆ. ಪೌರಕಾರ್ಮಿಕರೊಂದಿಗೆ ಇತರರು ಕೈಜೋಡಿಸುವಂತಾಗಬೇಕು ಎಂದರು.
ಇತ್ತೀಚೆಗೆ ಸಿಂಗಾಪುರ ಪ್ರವಾಸ ಕೈಗೊಂಡ ನಾಲ್ಕು ಮಂದಿ ಪೌರ ಕಾರ್ಮಿಕರು ತಮ್ಮ ಪ್ರವಾಸದ ಅನಿಸಿಕೆ ಹಂಚಿಕೊಂಡರು. ಸಿಂಗಾಪುರ ಕನ್ನಡಿ ಇದ್ದಂತೆ ಇದೆ. ಅಷ್ಟರ ಮಟ್ಟಿಗೆ ಶುಚಿತ್ವವನ್ನು ಕಾಪಾಡಿಕೊಂಡಿದ್ದಾರೆ. ಪೌರ ಕಾರ್ಮಿಕರ ಮೇಲೆ ಅಲ್ಲಿನ ಜನರು ಅವಲಂಬಿತರಾಗಿಲ್ಲ. ಅದೇ ರೀತಿ ನಮ್ಮಲ್ಲಿಯೂ ಆಗಬೇಕು. ಹಾಗಾದಾಗ ಮಾತ್ರ ನಗರದ ಸ್ವಚ್ಛತೆ, ಸೌಂದರ್ಯವನ್ನು ಕಾಣಬಹುದು ಎಂದು ಹೇಳಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಗೋಪಾಲಕೃಷ್ಣ ಮಾತನಾಡಿದರು. ಉತ್ತಮ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಮತ್ತು ಗೈರು ಹಾಜರಾಗದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನೀಕೃಷ್ಣ, ಸದಸ್ಯರಾದ ಶ್ರೀಮತಿ ಬಂಗೇರಾ, ಪ್ರಕಾಶ್ ಆಚಾರ್ಯ, ಸವಿತಾ ರಾಕೇಶ್, ಅನಿತಾ ಪೂವಯ್ಯ, ಉದಯಕುಮಾರ್, ಯತೀಶ್, ಎ.ಸಿ.ದೇವಯ್ಯ, ಇತರರು ಇದ್ದರು. ಎಚ್.ಡಿ.ರಂಗಪ್ಪ ಪ್ರಾರ್ಥಿಸಿದರು. ತಾಹೀರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.