(ಅಣ್ಣೀರ ಹರೀಶ್ ಮಾದಪ್ಪ)

ಶ್ರೀಮಂಗಲ, ಅ. 5 : ದ.ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಾಜ್ಯ ಹೆದ್ದಾರಿಯಾದ ಪೊನ್ನಂಪೇಟೆ - ಶ್ರೀಮಂಗಲ- ಕುಟ್ಟ ರಸ್ತೆಯು ಮಹಾಮಳೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಪೋಕಳತೋಡುವಿನ ಬಳಿ ರಸ್ತೆಯ ಅರ್ಧ ಭಾಗ ಭೂಕುಸಿತ ಉಂಟಾಗಿ ಹಾನಿಯಾಗಿತ್ತು. ಈ ರಸ್ತೆಯನ್ನು ಇದೀಗ ದುರಸ್ತಿ ಪಡಿಸಲಾಗಿದ್ದು, ಭಾರೀ ವಾಹನಗಳಿಗೆ ವಿಧಿಸಿದ್ದ ನಿರ್ಬಂಧವನ್ನು ತೆರವು ಗೊಳಿಸಲಾಗಿದೆ.

ಇದೇ ಆಗಸ್ಟ್ ತಿಂಗಳಿನಲ್ಲಿ ಈ ಹೆದ್ದಾರಿಯು ಟಿ.ಶೆಟ್ಟಿಗೇರಿ ಮತ್ತು ಹುದಿಕೇರಿ ನಡುವಿನ ಪೋಕಳತೋಡು ವಿನಲ್ಲಿ ರಸ್ತೆಯ ಅರ್ಧ ಭಾಗ ಕುಸಿತವಾಗಿ ಸುಮಾರು 20 ಅಡಿ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದ ಬಸ್ಸು ಸೇರಿದಂತೆ ಭಾರೀ ವಾಹನಗಳನ್ನು ಈ ಹೆದ್ದಾರಿ ಮೂಲಕ ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ನಿರ್ಬಂಧ ವಿಧಿಸಿತ್ತು.

ಸ್ಥಳೀಯ ಲಘು ಖಾಸಗಿ ವಾಹನಗಳಷ್ಟೇ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಇದೀಗ ಲೋಕೋಪಯೋಗಿ ಇಲಾಖೆ ಈ ಹೆದ್ದಾರಿಯನ್ನು ದುರಸ್ತಿ ಪಡಿಸಿದೆ. ರೂ. 14 ಲಕ್ಷ ವೆಚ್ಚದಲ್ಲಿ ಸುಮಾರು 15 ಅಡಿ ಆಳದಿಂದ ಕಾಮಗಾರಿ ನಡೆಸಲಾಗಿದ್ದು, 150 ಅಡಿ ಉದ್ದದವರೆಗೆ ದುರಸ್ತಿ ಮಾಡಿ ರಸ್ತೆ ಕುಸಿತ ಬದಿಯಲ್ಲಿ ಮರಳು ಚೀಲ, ಕಲ್ಲು, ವೆಟ್ ಮಿಕ್ಸ್‍ಗಳಿಂದ ದುರಸ್ತಿ ಪಡಿಸಲಾಗಿದೆ.

ಹಾನಿಯಾಗಿದ್ದ ರಸ್ತೆಯನ್ನು ಮಳೆ ಬಿಡುವಿನ ನಂತರ ಕಾಮಗಾರಿ ಕೈಗೆತ್ತಿಕೊಂಡು ದುರಸ್ತಿ ಪಡಿಸಲಾಗಿದೆ. ರೂ. 14 ಲಕ್ಷ ವೆಚ್ಚವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಂಟಾಗುವ ಇದೇ ರೀತಿಯ ರಸ್ತೆ ಹಾನಿಗೆ ದುರಸ್ತಿ ಮಾಡುವ ತಂತ್ರಜ್ಞಾನದಲ್ಲಿ ಕಾಮಗಾರಿ ಮಾಡಲಾಗಿದೆ. ಹೆದ್ದಾರಿಯ ಅಡಿಯಿಂದ 3 ಅಡಿ ಬಾರ್ಡರ್ಸ್, ಜೀಯೋಗ್ರೀಡ್, ಜೀಯೋ ಫ್ಯಾಬ್ರಿಕ್‍ಗಳನ್ನು ಬಳಸಲಾಗಿದೆ. ಇದು ತಾತ್ಕಾಲಿಕ ಹೆದ್ದಾರಿ ದುರಸ್ತಿಯಲ್ಲ, ಶಾಶ್ವತ ಕಾಮಗಾರಿಯಾಗಿದೆ ಎಂದು ಅಭಿಯಂತರ ಸಣ್ಣುವಂಡ ನವೀನ್ ತಿಳಿಸಿದ್ದಾರೆ.