ಕರಿಕೆ, ಅ. 5: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧÀ್ಯಕ್ಷ ಎನ್. ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿಯಾದ ಕೃಷಿ ಇಲಾಖೆಯ ಅಧಿಕಾರಿ ಗಿರೀಶ್ ಅವರ ಉಪಸ್ಥಿತಿಯಲ್ಲಿ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಳೆದ ಹತ್ತು ತಿಂಗಳ ಹಿಂದೆ ಮಂಜೂರಾಗಿದ್ದರೂ ಇನ್ನೂ ಪ್ರಾರಂಭವಾಗದ ಬಗ್ಗೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು,ಇದಕ್ಕೆ ಉತ್ತರಿಸಿದ ಆರೋಗ್ಯ ಅಧಿಕಾರಿಗಳು ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದು ಕೂಡಲೇ ವೈದ್ಯರ ನೇಮಕಾತಿಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಗ್ರಾಮದ ಬಹು ದಿನಗಳ ಬೇಡಿಕೆಯಾದ ಕರಿಕೆ-ಭಾಗಮಂಡಲ ರಸ್ತೆ ಹದಗೆಟ್ಟಿದ್ದು ಕೂಡಲೇ ದುರಸ್ತಿ ಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಂದಾಯ ಇಲಾಖೆಯ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗದೆ ಹತ್ತುವರುಷ ಕಳೆದಿದ್ದು ಹಕ್ಕುಪತ್ರ ಸಿಗದೆ ಗ್ರಾಮಸ್ಥರು ಸರ್ಕಾರದಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಸರಕಾರದ ಗಮನಸೆಳೆಯುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಯಿತು. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಗಿಡಗಳಿಗೆ ಸೊಪ್ಪು ಕಡಿಯುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ಅಡ್ಡಿಪಡಿಸುವ ಬಗ್ಗೆ ಇಲಾಖಾಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು, ಅಲ್ಲದೆ ಗ್ರಾಮದಲ್ಲಿ ಕಳ್ಳಬೇಟೆ, ಅಕ್ರಮ ಮರಸಾಗಾಟದ ಬಗ್ಗೆ ಕ್ರಮಕೈಗೊಳ್ಳಿ ಎಂದರು.ಸಭೆಯಲ್ಲಿ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ತಾ.ಪಂ. ಸದಸ್ಯೆ ಸಂದ್ಯಾ, ಪಂಚಾಯತಿ ಉಪಾಧ್ಯಕ್ಷೆ ಸೋಲಿ ಜಾರ್ಜ್, ಸದಸ್ಯರಾದ ರಮಾನಾಥ್, ಪುರುಷೋತ್ತಮ್ಮ, ಹರಿಪ್ರ್ರಸಾದ್, ಉಷಾಕುಮಾರಿ ಸೇರಿದಂತೆ ಇತರ ಸದಸ್ಯರು, ಆರೋಗ್ಯ, ಕಂದಾಯ, ತೋಟಗಾರಿಕೆ ಪೊಲೀಸ್, ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಸ್ವಾಗತಿಸಿದರು.