ಮಡಿಕೇರಿ, ಸೆ. 30: ಪ್ರಸಕ್ತ ಮಳೆಗಾಲದ ತೀವ್ರತೆ ನಡುವೆ ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡಿರುವ ನೈಜ ಫಲಾಲುಭವಿಗಳಿಗೆ ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ಜಿಲ್ಲಾಡಳಿತ ನಿವೇಶನಗಳನ್ನು ಈಗಾಗಲೇ ಗುರುತಿಸಿದ್ದು, ಭವಿಷ್ಯದ ಮನೆಗಳ ಮಾದರಿ ನಿರ್ಮಾಣದಲ್ಲಿ ಕಾರ್ಯೋನ್ಮುಖವಾಗಿದೆ. ಆ ಬೆನ್ನಲ್ಲೇ ಸರಕಾರದಿಂದ ನಿರ್ಮಿಸಲ್ಪಡುವ ಮನೆಗಳೊಂದಿಗೆ ಪರ್ಯಾಯ ಜಾಗಕ್ಕೆ ತೆರಳುವ ಬಗ್ಗೆ ಬಹುಮಂದಿ ನಿರಾಶ್ರಿತರು ಗೊಂದಲದಲ್ಲಿ ಸಿಲುಕಿದ್ದಾರೆ.
ಕೊಡಗು ಪುನರ್ವಸತಿ ಯೋಜನೆಯ ವಿಶೇಷ ಅಧಿಕಾರಿಯಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರ ಪ್ರಕಾರ, ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಸುಮಾರು 743 ಮಂದಿ ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಪ್ರಥಮ ಹಂತದಲ್ಲಿ ಮನೆಗಳನ್ನು ಕಲ್ಪಿಸಲಾಗುತ್ತಿದೆ. ಈ ಸಂಬಂಧ ವಿವಿಧ ಗೃಹ ನಿರ್ಮಾಣ ಸಂಸ್ಥೆಗಳು ಮೂರು ರೀತಿಯ ಮನೆಗಳನ್ನು ಕೆ. ನಿಡುಗಣೆಯ ಆರ್ಟಿಓ ಕಚೇರಿ ಬಳಿ ಗುರುತಿಸಿರುವ ನಿವೇಶನದೊಳಗೆ ಈಗಾಗಲೇ ನಿರ್ಮಿಸಲು ಮುಂದಾಗಿದೆ.ಈ ಮನೆಗಳ ಕೆಲಸ ಪೂರ್ಣಗೊಂಡ ಬಳಿಕ, ಅರ್ಹ ಫಲಾನುಭವಿಗಳಿಗೆ ಸಂಬಂಧಿಸಿದ ಮೂರು ಬಗೆಯ ಮನೆಗಳನ್ನು ಪ್ರತ್ಯಕ್ಷ ತೋರಿಸಲಾಗುತ್ತದೆ. ಆ ಮನೆಗಳಲ್ಲಿ ಯಾವದ್ದನ್ನು ಯಾರ್ಯಾರು ಒಪ್ಪಿಕೊಳ್ಳುತ್ತಾರೆಯೋ ಅಂತಹವರಿಗೆ ಮಾತ್ರ ಅಧಿಕೃತ ಒಪ್ಪಿಗೆ ಪತ್ರ ಪಡೆಯುವದರೊಂದಿಗೆ, ಆಯಾ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ.
ಉನ್ನತ ಮಟ್ಟದ ಸಭೆ : ಈ ಮನೆಗಳನ್ನು ಸಂತ್ರಸ್ತರ ಒಪ್ಪಿಗೆ ಪಡೆದ ಬಳಿಕ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತದ ಹಂತದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ಸಮಾಲೋಚನೆ ನಡೆಸಲಾಗುತ್ತದೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ಬಳಿಕವಷ್ಟೇ ವಿವಿಧೆಡೆಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗುತ್ತದೆ. ಈಗಾಗಲೇ ಮನೆಗಳನ್ನು ಕಳೆದುಕೊಂಡಿರುವವರಿಗೆ, ಪುನರ್ವಸತಿಗಾಗಿ ಗುರುತಿಸಿರುವ 11 ಕಡೆ ನಿವೇಶನಗಳಲ್ಲಿ ಆಯಾ ಪ್ರದೇಶದವರಿಗೆ ಯಾವ ಜಾಗ ಹತ್ತಿರವಾಗುವದೋ ಅಂತಹ ಕಡೆ ಮನೆ ಕಟ್ಟಿಕೊಡಲಾಗುತ್ತದೆ. ಅದು ಕೂಡ ಫಲಾನುಭವಿಗಳ ಸಮ್ಮತಿ ಬಳಿಕವಷ್ಟೆ ಅನುಷ್ಠಾನಗೊಳ್ಳಲಿದೆ.
ವರದಿ ಪರಿಶೀಲಿಸಿ ಕ್ರಮ : ಈಗಾಗಲೇ ಸಾವಿರಾರು ಮಂದಿ ಮನೆಗಳಿಗೆ ಅರ್ಜಿ ಸಲ್ಲಿಸಿದ್ದು, ವಿವಿಧ ಗ್ರಾ.ಪಂ. ವ್ಯಾಪ್ತಿಯ ಪಂಚಾಯಿತಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಸಮೀಕ್ಷೆ ನಡೆಸಿ ನೈಜ ಫಲಾನುಭವಿಗಳನ್ನು ಗುರುತಿಸಿರುವ ಆಧಾರದಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಒದಗಿಸಲಾಗುತ್ತದೆ. ಅಂತೆಯೇ ಈ ಸಂತ್ರಸ್ತರ ಪಟ್ಟಿಯನ್ನು ಆಯಾ ಗ್ರಾ.ಪಂ. ಗಳಲ್ಲಿ ಪ್ರಕಟಿಸಿದ್ದು, ಬಿಟ್ಟು ಹೋದವರ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಗೊಂದಲ : ಈ ನಡುವೆ 2ನೇ ಮೊಣ್ಣಂಗೇರಿ ಗ್ರಾಮದ ಎಲ್ಲರನ್ನೂ ಅಲ್ಲಿಂ ದ ಸ್ಥಳಾಂತರಿಸುವಂತೆ ಮತ್ತು ಆ ಪ್ರದೇಶ ಜನವಸತಿಗೆ ಸೂಕ್ತವಿಲ ್ಲವೆಂದು ಭಾರತೀಯ ಭೂಗರ್ಭ ಶಾಸ್ತ್ರ ಅಧ್ಯಯನ ಇಲಾಖೆಯು ಸಲ್ಲಿಸಿರುವ ವರದಿ ಆಧರಿಸಿ 28 ಭಾಗದ ಎಲ್ಲರಿಗೆ ಪರ್ಯಾಯ (ಮೊದಲಪುಟದಿಂದ) ವಸತಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಇತ್ತ 2ನೇ ಮೊಣ್ಣಂಗೇರಿಯ ಬಹುಮಂದಿ ತಮ್ಮ ನೆಲಬಿಡಲು ಮನಸ್ಸಿಲ್ಲದೆ ಗೊಂದಲದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅಂತಹವರು ಪರಿಹಾರ ಕೇಂದ್ರಗಳಲ್ಲಿ ಇದ್ದುಕೊಂಡೇ ತಮ್ಮ ಅಳಿದುಳಿದಿರುವ ಜಾಗವನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಹೀಗಾಗಿ ಈ ಕಟುಂಬಗಳ ಸಹಿತ ಜಿಲ್ಲೆಯ ಇತರೆಡೆಯ ನಿರಾಶ್ರಿತರಿಗೆ ತುರ್ತು ಸ್ಪಂದಿಸಿರುವ ಜಿಲ್ಲಾಡಳಿತವು ಕುಡಿಯುವ ನೀರು, ವಿದ್ಯುತ್ ಸಂಪರ್ಕದೊಂದಿಗೆ ತಾತ್ಕಾಲಿಕ ರಸ್ತೆ ಕಲ್ಪಿಸಲು ಮುಂದಾಗಿದೆ. ಅಲ್ಲದೆ ಅನೇಕರು ಭೂಕುಸಿತದ ಪ್ರದೇಶಗಳಿಂದ ಬದಲಿ ಪುನರ್ವಸತಿಗೆ ಸ್ಥಳಾಂತರಗೊಂಡ ಬಳಿಕ, ಈಗ ಅಪಾಯ ಸಂಭವಿಸಿರುವ ಸ್ಥಳದಲ್ಲೇ ಕೃಷಿ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಬೇಕಾದೀತು ಎಂಬ ಗೊಂದಲದಲ್ಲಿ ಜಿಲ್ಲಾಡಳಿತವಿದೆ.
ಇಂತಹ ಗೊಂದಲಗಳನ್ನು ನಿವಾರಿಸುವ ದಿಸೆಯಲ್ಲಿ ಜಿಲ್ಲಾಡಳಿತ ಸರಕಾರದ ಮಟ್ಟದಲ್ಲಿ ವ್ಯವಹರಿಸುತ್ತಿದ್ದು, ಜಿಲ್ಲೆಯ ಶಾಸಕರುಗಳ ಸಹಿತ ಉಸ್ತುವಾರಿ ಸಚಿವರ ಅಭಿಪ್ರಾಯದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಚಿಂತನೆ ಹರಿಸಿದೆ.
ಪರ್ಯಾಯ ಮನೆ: ಮೂಲಗಳ ಪ್ರಕಾರ ಮಾದಾಪುರ, ಮುಕ್ಕೋಡ್ಲು, ಕಾಂಡನಕೊಲ್ಲಿ, ಸುತ್ತಮುತ್ತಲಿನ ನಿರಾಶ್ರಿತರಿಗೆ ಮಾದಾಪುರ ತೋಟಗಾರಿಕಾ ಕ್ಷೇತ್ರದ ಜಾಗದಲ್ಲಿ ಪುನರ್ವಸತಿಗೆ ನಿರ್ಧರಿಸಲಾಗಿದೆ. ಕಾಲೂರು ಸುತ್ತಮುತ್ತಲಿನ ನಿವಾಸಿಗಳಿಗೆ ಅಲ್ಲಿನ ಸೀತಾರಾಮಪಾಟಿ ಬಳಿ ಜಾಗ ಗುರುತಿಸಲಾಗಿದೆ. 2ನೇ ಮೊಣ್ಣಂಗೇರಿ ಹಾಗೂ ಇತರೆಡೆಯ ನಿವಾಸಿಗಳಿಗೆ ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆ ಹಾಗೂ ಬಿಳಿಗೇರಿಯಲ್ಲಿ ನಿವೇಶನ ಕಾಯ್ದಿರಿಸಿದ್ದು, ಸಂಪಾಜೆ ಶಾಲೆ ಬಳಿಯೂ ಜಾಗ ಗುರುತಿಸಲಾಗಿದೆ.
 
						