ಕುಶಾಲನಗರ, ಅ. 4: ಕರ್ನಾಟಕ ರಾಜ್ಯ ಸರಕಾರಿ ಎನ್‍ಪಿಎಸ್ ನೌಕರರ ಸಂಘ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.
ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ರಕ್ತ ನಿಧಿ ಘಟಕದ ವೈದ್ಯ ಡಾ. ಕರುಂಬಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದಾನಿಗಳು ನೀಡುವ ರಕ್ತ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಮಹತ್ಕಾರ್ಯಕ್ಕೆ ಬಳಕೆಯಾಗಲಿದೆ. ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸುವ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು. ಎನ್‍ಪಿಎಸ್ ನೌಕರರ ಸಂಘ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ. ಸತೀಶ್ ಮಾತನಾಡಿ, 2006 ನಂತರ ಸರಕಾರಿ ಸೇವೆಗೆ ಸೇರ್ಪಡೆಗೊಂಡವರಿಗೆ ಪಿಂಚಣಿ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿದ್ದು ನಿವೃತ್ತಿ ನಂತರ ಜೀವನ ಅಭದ್ರತೆ ಕಾಡುತ್ತಿದೆ. ಪಿಂಚಣಿ ವ್ಯವಸ್ಥೆ ಬದಲಾವಣೆಗೆ ಹಲವು ಹೋರಾಟಗಳು, ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ಆ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ದೇಶದಲ್ಲಿ ಏಕರೂಪ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಿದೆ ಎಂದು ಒತ್ತಾಯಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್ ಮಾತನಾಡಿ, ರಕ್ತದಾನದ ಪ್ರಯೋಜನಗಳ ಬಗ್ಗೆ ಮಾಹಿತಿ ಒದಗಿಸಿದರು. ರಾಜ್ಯ ಸರಕಾರಿ ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಂದ್ರ, ಕಾರ್ಯದರ್ಶಿ ದಿನೇಶ್, ತಾಲೂಕು ಘಟಕದ ಕಾರ್ಯದರ್ಶಿ ಕೆ.ಆರ್. ನವೀನ್‍ಕುಮಾರ್, ಖಜಾಂಚಿ ಟಿ.ಆರ್. ಪ್ರಭು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಚೇತನ್, ತಾಲೂಕು ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಅಧ್ಯಕ್ಷ ಧರ್ಮಪ್ಪ ಸೇರಿದಂತೆ ವೀರಾಜಪೇಟೆ, ಮಡಿಕೇರಿ ತಾಲೂಕಿನ ಎನ್‍ಪಿಎಸ್ ನೌಕರರು ಇದ್ದರು.
ಈ ಸಂದರ್ಭ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂದಾಯ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಶಿಬಿರದಲ್ಲಿ 50 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.
 
						