ನವದೆಹಲಿ, ಅ. 4: ಸತತ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಮೋದಿ ಸರ್ಕಾರವು ಗುರುವಾರದಂದು ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಅಬಕಾರಿ ಸುಂಕ ಒಂದೂವರೆ ರೂಪಾಯಿ ಕಡಿತ ಮಾಡಲಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು 1 ರೂ. ದರ ಇಳಿಕೆ ಮಾಡುವದರಿಂದ ಒಟ್ಟಾರೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 2.50 ರೂಪಾಯಿ ಕಡಿತಗೊಳ್ಳಲಿದೆ ಎಂದರು.ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ (ಮೊದಲ ಪುಟದಿಂದ)ಸದ್ಯ ಸರಾಸರಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ 19.48 ರೂ. ನಷ್ಟು ಅಬಕಾರಿ ಸುಂಕವಿದ್ದರೆ, ಡೀಸೆಲ್ ಮೇಲೆ 15.33 ರಷ್ಟು ಸುಂಕವಿದೆ. ಈ ಸುಂಕ ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಲಾಗಿತ್ತು. ಕೊನೆಗೂ ಒತ್ತಡಕ್ಕೆ ಮಣಿದು, ಬೆಲೆ ಇಳಿಸಿದೆ.
ರಾಜ್ಯಗಳು ಇಂಧನದ ಮೇಲೆ ಹೇರುತ್ತಿರುವ ವ್ಯಾಟ್ ಅನ್ನು ಕಡಿಮೆ ಮಾಡಿ ಒಟ್ಟು ಇಂಧನದ ಮೇಲೆ 5 ರೂಪಾಯಿ ಕಡಿಮೆ ಮಾಡಬೇಕೆಂದು ಕೇಂದ್ರವು ರಾಜ್ಯಗಳಿಗೆ ಪತ್ರ ಬರೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.
 
						