ಸೋಮವಾರಪೇಟೆ,ಅ.4: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಅತಿಕ್ರಮಣ ಮಾಡಿ ಕೊಂಡಿರುವ 5.50 ಎಕರೆ ಪ್ರದೇಶದ ಸುಗ್ಗಿದೇವರ ಬನದ ದೇವರಕಾಡನ್ನು ತಕ್ಷಣ ತೆರವುಗೊಳಿಸಬೇಕೆಂದು ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಅವರು ಆದೇಶ ನೀಡಿದ್ದಾರೆ.
ಶಾಂತಳ್ಳಿ ಹೋಬಳಿಯ ತಲ್ತರೆಶೆಟ್ಟಳ್ಳಿ ಗ್ರಾಮದ ಸ.ನಂ. 2/1ರಲ್ಲಿರುವ 5.50 ಎಕರೆ ಜಾಗವನ್ನು ಅಭಿಮಠ ಬಾಚಳ್ಳಿ ಗ್ರಾಮದ ಜಿ. ತಿಮ್ಮಯ್ಯ ಎಂಬವರ ಪುತ್ರ ಜಿ.ಟಿ. ಬೋಜರಾಜು ಅವರು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಈ ಸ್ಥಳದಲ್ಲಿ ಬೇಸಾಯ ಮಾಡುತ್ತಿದ್ದರು. ಈ ಬಗ್ಗೆ ಗ್ರಾಮದ ಕೆಲವರು ದೂರು ದಾಖಲಿಸಿದ್ದು, ಅನೇಕ ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರು.
ಇದೀಗ ವಿಚಾರಣಾಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯಾಗಿರುವ ಎಂ.ಎಸ್. ಚಿಣ್ಣಪ್ಪ ಅವರು ದಾಖಲೆಗಳ ಪರಿಶೀಲನೆ ನಡೆಸಿದ್ದು, 2/1ರಲ್ಲಿರುವ 5.50 ಎಕರೆ ಜಾಗವು ಅತಿಕ್ರಮಣಗೊಂಡಿರುವ ದೇವರಕಾಡು ಆಗಿದ್ದು, ತಕ್ಷಣ ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆ.
1978ಕ್ಕಿಂತಲೂ ಪೂರ್ವದ ಹಕ್ಕು ಸಾಬೀತುಪಡಿಸುವ ಯಾವದೇ ದಾಖಲೆ ಪತ್ರಗಳನ್ನು ವಿಚಾರಣಾಧಿಕಾರಿಯ ಎದುರು ಹಾಜರುಪಡಿಸುವಲ್ಲಿ ವಿಫಲ ರಾಗಿರುವದರಿಂದ ಕರ್ನಾಟಕ ರಾಜ್ಯ ಅರಣ್ಯ ಅಧಿನಿಯಮ 1963ರ ಕಲಂ 64 ಎ ಪ್ರಕಾರ ದತ್ತವಾದ ಅಧಿಕಾರ ದಂತೆ, ಅತಿಕ್ರಮಣ ಪ್ರದೇಶವನ್ನು, ಅತಿಕ್ರಮಣ ಮಾಡಿರುವವರು ಖುಲ್ಲಾ ಪಡಿಸಲು ಆದೇಶಿಸಿದ್ದಾರೆ.
ಆದೇಶ ಪ್ರತಿ ತಲಪಿದ 15 ದಿನಗಳ ಸದರಿ ಪ್ರದೇಶದಲ್ಲಿನ ಮನೆ ಮತ್ತು ಕೃಷಿ ಬೆಳೆಯನ್ನು ತೆಗೆದುಕೊಂಡು ಜಾಗವನ್ನು ತೆರವುಗೊಳಿಸಬೇಕು. ಜಾಗದಲ್ಲಿರುವ ಮರಗಳಿಗೆ ಯಾವದೇ ಹಾನಿ ಮಾಡದೇ, ಜಾಗವನ್ನು ಅರಣ್ಯ ಇಲಾಖೆಗೆ ವಹಿಸಿಕೊಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಇದರೊಂದಿಗೆ ಅಕ್ರಮ ಸಕ್ರಮ ಸಮಿತಿಯ ಕಾರ್ಯದರ್ಶಿ ಮತ್ತು ತಾಲೂಕು ತಹಶೀಲ್ದಾರರು, ಈ ಜಾಗವು ಸುಗ್ಗಿ ದೇವರ ಬನದ ದೇವರ ಕಾಡಾಗಿದ್ದು, ಅಕ್ರಮ ಸಕ್ರಮ ಸಮಿತಿಯ ಅಡಿಯಲ್ಲಿ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿ, ಜಿ.ಟಿ. ಬೋಜರಾಜು ಅವರ ಅರ್ಜಿಯನ್ನು ತಿರಸ್ಕರಿಸಿದ್ದು, ಈ ಬಗ್ಗೆಯೂ ವಿಚಾರಣಾಧಿಕಾರಿಗಳು ಆದೇಶದಲ್ಲಿ ಬೆಳಕು ಚೆಲ್ಲಿದ್ದಾರೆ.
 
						