ಮಡಿಕೇರಿ, ಅ. 4: ರಾಜ್ಯದಲ್ಲಿರುವ 178 ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ಗಳ ಪೈಕಿ ಮಡಿಕೇರಿ ತಾಲೂಕು ಪಿಎಲ್ಡಿ ಬ್ಯಾಂಕ್ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಕಾಸ್ಕಾಡ್)ನ ಮಹಾಸಭೆಯಲ್ಲಿ ಮಡಿಕೇರಿ ಪಿಎಲ್ಡಿ ಬ್ಯಾಂಕ್ನ ಪರವಾಗಿ ತಾನು ಮತ್ತು ವ್ಯವಸ್ಥಾಪಕರು ಪ್ರಶಸ್ತಿಯನ್ನು ಸ್ವೀಕರಿಸಿರುವದಾಗಿ ತಿಳಿಸಿದರು.
1957ರಲ್ಲಿ 25 ಮಂದಿ ಸದಸ್ಯರು ಹಾಗೂ 3 ಸಾವಿರ ರೂ. ಪಾಲು ಬಂಡವಾಳದೊಂದಿಗೆ ಆರಂಭವಾದ ಮಡಿಕೇರಿ ತಾಲೂಕು ಪಿಎಲ್ಡಿ ಬ್ಯಾಂಕ್ ಪ್ರಸಕ್ತ 2550 ಸದಸ್ಯರು ಹಾಗೂ 97 ಲಕ್ಷ ರೂ.ಗಳ ಪಾಲು ಬಂಡವಾಳದೊಂದಿಗೆ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಕಳೆದ 2003ರವರೆಗೂ ನಷ್ಟದಲ್ಲಿ ಸಾಗುತ್ತಿದ್ದ ಬ್ಯಾಂಕ್ 2006-07 ರಿಂದ ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು,
(ಮೊದಲ ಪುಟದಿಂದ) ಸದಸ್ಯರಿಗೆ ಹೆಚ್ಚಿನ ಮೊತ್ತದ ಲಾಭಾಂಶವನ್ನು ವಿತರಿಸುತ್ತಿದೆ. ತಾಲೂಕಿನ ರೈತರು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವದರ ಜೊತೆಗೆ ಬ್ಯಾಂಕಿನ ಮಾಜಿ ಅಧ್ಯಕ್ಷರುಗಳು ಹಾಗೂ ಹಾಲಿ ಆಡಳಿತ ಮಂಡಳಿಯ ಪರಿಶ್ರಮದಿಂದ ಬ್ಯಾಂಕ್ ಇದೀಗ ಪ್ರಶಸ್ತಿ ಪಡೆಯುವ ಹಂತಕ್ಕೆ ತಲಪಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಜಿಲ್ಲೆಯ ಎಲ್ಲಾ ಬ್ಯಾಂಕ್ಗಳಿಗಿಂತ ಸರಳ ವಿಧಾನದಲ್ಲಿ ಅತೀ ಶೀಘ್ರವಾಗಿ ರೈತರಿಗೆ ಸಾಲವನ್ನು ಒದಗಿಸಲಾಗುತ್ತಿದ್ದು, ಮಾರ್ಚ್ ಅಂತ್ಯದ ಒಳಗಾಗಿ ಸಾಲ ಮರುಪಾವತಿಸುವ ರೈತ ಸದಸ್ಯರಿಗೆ ಬ್ಯಾಂಕಿನ ಲಾಭಾಂಶದಿಂದ ಶೇ.2 ರಷ್ಟು ಪ್ರೋತ್ಸಾಹ ಧನವನ್ನು ನೀಡುವದರೊಂದಿಗೆ, ಶೇ.3ರ ಬಡ್ಡಿದರದ ಕೃಷಿ ಸಾಲವನ್ನು ಶೇ.1 ಕ್ಕೆ ವಿತರಿಸುತ್ತಿರುವ ರಾಜ್ಯದ ಏಕೈಕ ಬ್ಯಾಂಕ್ ತಮ್ಮದಾಗಿದೆ ಎಂದರು.
ಪ್ರಸಕ್ತ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಬ್ಯಾಂಕ್ನ ಸದಸ್ಯರು ಸ್ಪಂದಿಸುವದರೊಂದಿಗೆ ಈ ಸಾಲಿನ ಲಾಭಾಂಶದ ಎಲ್ಲಾ ಮೊತ್ತವನ್ನು ಹಾಗೂ ಸಿಬ್ಬಂದಿಗಳ ನೆರವನ್ನು ಒಗ್ಗೂಡಿಸಿ 10 ಲಕ್ಷ ರೂ.ಗಳ ನೆರವನ್ನು ಸಂತ್ರಸ್ತರಿಗೆ ನೀಡಿದೆಯೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಎಂ.ಪಿ. ಮುತ್ತಪ್ಪ, ಬಲ್ಲಚಂಡ ಕಾವೇರಪ್ಪ, ಉಪಾಧ್ಯಕ್ಷ ಕೊಂಗೇಟಿರ ಗಣಪತಿ, ನಿರ್ದೇಶಕಿ ಮಾತಂಡ ಪೊನ್ನಮ್ಮ ಬೆಳ್ಳಿಯಪ್ಪ ಹಾಗೂ ವ್ಯವಸ್ಥಾಪಕ ಬಾಲಗಂಗಾಧರ್ ಉಪಸ್ಥಿತರಿದ್ದರು.
 
						