ಗೋಣಿಕೊಪ್ಪಲು,ಅ.4: ಕೊಡಗಿನ ಪಹಣಿಪತ್ರ (ಆರ್‍ಟಿಸಿ)ದಲ್ಲಿ ಕೇವಲ ದೀರ್ಘಕಾಲಿಕ ವಾಣಿಜ್ಯ ಬೆಳೆಯಾಗಿ ಕಾಫಿಯನ್ನು ಮಾತ್ರ ನಮೂದು ಮಾಡಲಾಗುತ್ತದೆ. ಕಾಳುಮೆಣಸು, ಏಲಕ್ಕಿ ಇತ್ಯಾದಿ ದೀರ್ಘಕಾಲಿಕ ಬೆಳೆಗಳನ್ನು ನಮೂದು ಮಾಡಬೇಕು.ಕೊಡಗಿನ ಕಾಳುಮೆಣಸಿಗೆ ಕೇರಳದಲ್ಲಿ ಜಿಎಸ್‍ಟಿ ಹಾಗೂ ಇತ್ಯಾದಿ ತೆರಿಗೆ ವಿಧಿಸಿ ವಿದೇಶಕ್ಕೆ ರಫ್ತು ಮಾಡುತ್ತಿರುವದರಿಂದ ಕೊಡಗಿನ ಕಾಳುಮೆಣಸು ಕೇರಳದ ಉತ್ಪಾದನೆಯಂತೆ ಅನ್ಯಾಯವಾಗು ತ್ತಿದೆ. ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆಯೇ ಇಲ್ಲ ಎಂಬಂತೆ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಎಪಿಎಂಸಿ ಗಡಿ ತಪಾಸಣಾ ಠಾಣೆ ಕ್ರಿಯಾಶೀಲವಾಗ ಬೇಕು. ರಾಜ್ಯ ಸರ್ಕಾರಕ್ಕೆ ತೆರೆಗೆ ಪಾವತಿಸಿ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಗಂಭೀರ ಚಿತ್ರಣವನ್ನು ನೀಡಿದರು.ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸುಮಾರು ರೂ.270 ಲಕ್ಷದ ವಿವಿಧ ಸಾಮಥ್ರ್ಯದ

(ಮೊದಲ ಪುಟದಿಂದ) ಗೋದಾಮು ಹಾಗೂ ಕೃಷಿ ಕಣ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಅವರೊಂದಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕೊಡಗಿನ ಆರ್‍ಟಿಸಿಯಲ್ಲಿ ವರ್ಷಂಪ್ರತಿ ಕೃಷಿ ಹುಟ್ಟುವಳಿ ನಮೂದು ಮಾಡುವ ಬದಲು ಕೃಷಿಕ ಬೆಳೆಯುವ ದೀರ್ಘಕಾಲಿಕ ಉತ್ಪನ್ನಗಳ ಮಾಹಿತಿ ಕಲೆಹಾಕಿ ನಮೂದು ಮಾಡುವ ಬಗ್ಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಲ್ಲಿ ಮಾತುಕತೆ ನಡೆಸಿದ್ದು ಇದು ಜಾರಿಗೊಳ್ಳಬೇಕಾಗಿದೆ ಎಂದು ಹೇಳಿದರು.

ದೇಶದ ಎಲ್ಲ ಎಪಿಎಂಸಿಗಳನ್ನು ಆನ್‍ಲೈನ್ ಲಿಂಕ್ ಮಾಡಿರುವದರಿಂದ ಇನ್ನು ಮುಂದೆ ರೈತರು ತಮ್ಮ ಕೃಷಿ ಹುಟ್ಟುವಳಿಗಳನ್ನು ದೇಶದ ಯಾವದೇ ಭಾಗದಲ್ಲಿ ಲಾಭದಾಯಕವಾಗಿ ನೇರ ಮಾರಾಟ ಮಾಡಲು ಅವಕಾಶವಿದೆ. ಮಧ್ಯವರ್ತಿಗಳನ್ನು ತಪ್ಪಿಸಿ ರೈತರು ತಮ್ಮ ಲಾಭಾಂಶ ಹೆಚ್ಚಿಸಿಕೊಳ್ಳಲು ಅವರು ಸಲಹೆ ನೀಡಿದರು. ಪ್ರಧಾನಿ ಮೋದಿ ಅವರು ಕೃಷಿ ಪದಾರ್ಥಗಳ ಆನ್‍ಲೈನ್ ವ್ಯವಹಾರ ಜಾರಿಗೆ ತಂದಿರುವ ಹಿನ್ನೆಲೆ ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ದರಕ್ಕೆ ಮಾರಾಟ ಮಾಡುವಂತಾಗಬೇಕು ಹಾಗೂ ಆಯಾ ಜಿಲ್ಲೆಗಳ ಗುಣ ಲಕ್ಷಣಗಳಿಗನುಗುಣವಾಗಿ ಅಲ್ಲಿನ ಕೃಷಿ ಹುಟ್ಟುವಳಿಯನ್ನು ಕೆಡದಂತೆ, ಗುಣ ಮಟ್ಟ ಕುಸಿಯದಂತೆ ಸಂಸ್ಕರಿಸಿ ಮಾರಾಟ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಪಿಎಂಸಿಗಳು ರೈತರಿಗೆ ಸಹಕರಿಸಬೇಕು.ರಾಜ್ಯದಲ್ಲಿಯೇ ಕಳೆದ ಹಲವು ವರ್ಷಗಳಿಂದ ಗೋಣಿಕೊಪ್ಪಲು ಎಪಿಎಂಸಿ ಮೂಲಕ ರೈತಪರ ಕೆಲಸಗಳಾಗುತ್ತಿದೆ. ಇಡೀ ರಾಜ್ಯದಲ್ಲಿಯೇ ಇಷ್ಟೊಂದು ಗೋದಾಮು,ಕೃಷಿ ಕಣ ಎಲ್ಲಿಯೂ ನಿರ್ಮಾಣವಾಗಿಲ್ಲ ಇದರ ಸದುಪಯೋಗ ಹೊಂದಲು ರೈತರಿಗೆ ಕರೆ ನೀಡಿದರು.

ರೈತರ ಕೃಷಿ ಆದಾಯವನ್ನು ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಾರಿ ಭತ್ತಕ್ಕೆ ಶೇ.50 ಅತ್ಯಧಿಕ ಬೆಂಬಲ ಬೆಲೆ ನಿಗದಿ ಮಾಡಿದೆ. ದೇಶದ ವಿವಿಧ ಭಾಗದ ಕೃಷಿ ಉತ್ಪಾದನೆ ಕೇಂದ್ರ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಿದೆ. 2022 ರ ವೇಳೆಗೆ ಶೇ.100 ಕ್ಕೆ ನೂರು ಬೆಂಬಲ ಬೆಲೆ ನೀಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ ಎಂದು ಹೇಳಿದರು.

ಕೇಂದ್ರವು ರಾಜ್ಯ ಸರ್ಕಾರದ ಯಾವದೇ ಅನುದಾನವಿಲ್ಲದೆ ಬೆಂಗಳೂರು-ಮೈಸೂರು 10 ಲೇನ್ ರಾಷ್ಟ್ರೀಯ ಹೆದ್ದಾರಿ, ಎಕ್ಸ್‍ಪ್ರೆಸ್ ಲೇನ್, ಕೊಡಗಿನಲ್ಲಿಯೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದತ್ತ ಒಲವು ತೋರಿದೆ. ಸುವಿನ್ ಗಣಪತಿ ಅವರ ಅವಧಿಯಲ್ಲಿ ಗೋಣಿಕೊಪ್ಪಲು ಎಪಿಎಂಸಿ ಗುರಿ ಮೀರಿದ ಸಾಧನೆ ಮಾಡಿರುವ ಕುರಿತು ಅವರು ಶ್ಲಾಘಿಸಿದರಲ್ಲದೆ, ಮುಂದಿನ ನೂತನ ಅಧ್ಯಕ್ಷಾವಧಿಯಲ್ಲಿಯೂ ಇದೇ ಮಾದರಿ ಕೆಲಸ ನಡೆಯಲಿ ಎಂದು ಅಭಿಪ್ರಾಯಪಟ್ಟರು.

ಗುಣಮಟ್ಟದ ಕಾಮಗಾರಿ ನಡೆಯಲಿ-ಬೋಪಯ್ಯ

ಗೋಣಿಕೊಪ್ಪಲು ಎಪಿಎಂಸಿ ಮೂಲಕ ತಾಲೂಕಿನ ವಿವಿಧ ಭಾಗದಲ್ಲಿ ಸುಮಾರು ರೂ.270 ಲಕ್ಷ ವೆಚ್ಚದಲ್ಲಿ 100,200 ಮೆಟ್ರಿಕ್ ಟನ್ ಗೋದಾಮು ಹಾಗೂ ಕೃಷಿ ಕಣ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿದ್ದು ಗುಣಮಟ್ಟದ ಕಾಮಗಾರಿ ನಡೆಯುವ ನಿಟ್ಟಿನಲ್ಲಿ ಎಲ್ಲ ಚುನಾಯಿತ ಸದಸ್ಯರು ಎಚ್ಚರ ವಹಿಸಬೇಕು. ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ಗೋಣಿಕೊಪ್ಪಲು ಎಪಿಎಂಸಿ ಮೂಲಕ 2008 ರಿಂದಲೇ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ, ವಾಣಿಜ್ಯ ಬೆಳೆಗಳ ದಾಸ್ತಾನಿಗೆ ಗೋದಾಮು ಹಾಗೂ ಕೃಷಿ ಕಣ, ಸಾಲ ಸೌಲಭ್ಯ, ವಿಮಾ ಸೌಲಭ್ಯ ಇತ್ಯಾದಿಗಳನ್ನು ಅಳವಡಿಸುತ್ತಾ ಉತ್ತಮ ಸೇವೆ ನೀಡಲಾಗುತ್ತಿದೆ.ಇದರ ಸದುಪಯೋಗ ವಾಗಬೇಕು. ಭತ್ತವನ್ನು ಅಧಿಕವಾಗಿ ಬೆಳೆದು ಉತ್ತಮ ಬೆಂಬಲ ಬೆಲೆಯ ಲಾಭ ಹೊಂದಿಕೊಳ್ಳುವಂತಾಗಬೇಕು. ದಲ್ಲಾಳಿಗಳ ಪಾತ್ರವನ್ನು ತಪ್ಪಿಸಿ ನೇರವಾಗಿ ಅತ್ಯಧಿಕ ಬೆಲೆಗೆ ರೈತರ ಉತ್ಪನ್ನ ಮಾರಾಟವಾಗುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಕೇಂದ್ರವು ರಸಗೊಬ್ಬರ ಕೊರತೆ ಕಾಡದಂತೆ ಹಾಗೂ ಗೊಬ್ಬರ ಸಹಾಯಧನವನ್ನು ಘೋಷಿಸಿದೆ ಇದರ ಸದುಪಯೋಗವನ್ನು ಎಲ್ಲ ರೈತರೂ ಹೊಂದಿಕೊಳ್ಳುವಂತಾಗಬೇಕು ಎಂದು ಹೇಳಿದರು. ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್‍ಗಣಪತಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು.

ವೇದಿಕೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಕಳ್ಳಂಗಡ ಪಿ.ಬಾಲಕೃಷ್ಣ, ತಾ.ಪಂ.ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಎಪಿಎಂಸಿ ನೂತನ ಕಾರ್ಯದರ್ಶಿ ಹೆಚ್.ಸಿ.ರಾಣಿ, ಕಾರ್ಯಪಾಲಕ ಅಭಿಯಂತರ ಎಸ್.ಎಂ.ನಟರಾಜ್, ವರ್ತಕರ ಕ್ಷೇತ್ರದ ಕಿಲನ್ ಗಣಪತಿ , ಚುನಾಯಿತ ಸದಸ್ಯರಾದ ಎ.ಎಂ. ಮುತ್ತಪ್ಪ, ಮಾಚಂಗಡ ಸುಜಾ ಪೂಣಚ್ಚ, ಸಿ.ಜಿ.ಸುಬ್ರಮಣಿ, ಅದೇಂಗಡ ಚಂಗಪ್ಪ (ವಿನು), ಹೆಚ್.ಎನ್. ಮೋಹನ್‍ರಾಜ್, ಜಿಲ್ಲಾಂಡ ಕೆ.ಅಯ್ಯಪ್ಪ, ಕೊಟ್ಟಕುಟ್ಟಡ ಯು.ಭೀಮಣಿ, ನಾಮೇರ ಧರಣಿ ತಿಮ್ಮಯ್ಯ, ಬೊಳ್ಳಜೀರ ಸುಶೀಲ, ಹೆಚ್.ಎಸ್.ರಾಜು ಉಪಸ್ಥಿತರಿದ್ದರು. ಲಯನ್ಸ್ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಎಪಿಎಂಸಿಯ ಪಿ.ಜಿ. ಜಯಂತಿ ನಿರೂಪಣೆ ಹಾಗೂ ಕೊಡಗು ಜಿಲ್ಲೆ ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಯು.ಚಿಕ್ಕಜ್ಜ ವಂದನಾರ್ಪಣೆ ನೆರವೇರಿಸಿದರು.

ಅಮ್ಮತ್ತಿ ಕಾವಾಡಿ ಭಗವತಿ ದೇವಸ್ಥಾನದ ಆವರಣದಲ್ಲಿ ರೂ.5 ಲಕ್ಷ ವೆಚ್ಚದ ಕೃಷಿ ಕಣ ನಿರ್ಮಾಣ, ಅಲ್ಲಿನ ಎಪಿಸಿಎಂಎಸ್ ಆವರಣದಲ್ಲಿ ರೂ.17.05 ಲಕ್ಷದ 100 ಮೆ.ಟನ್ ಸಾಮಥ್ರ್ಯದ ಗೋದಾಮು, ಪಾಲಿಬೆಟ್ಟ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 100 ಮೆ.ಟನ್ ಸಾಮಥ್ರ್ಯದ ಗೋದಾಮು, ಗೋಣಿಕೊಪ್ಪಲು ಎಪಿಸಿಎಂಎಸ್ ಆವರಣದಲ್ಲಿ 100 ಮೆ.ಟನ್. ಗೋದಾಮು, ಎಪಿಎಂಸಿ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಇದೇ ಸಂದರ್ಭ ಶಂಕುಸ್ಥಾಪನೆ ನೆರವೇರಿಸಲಾಯಿತು.

ಪ್ರಗತಿಪರ ಕೃಷಿಕರಿಗೆ ಸನ್ಮಾನ

ಈಚೂರು, ಕುಂದಗ್ರಾಮದ ಕಾಳುಮೆಣಸು ಕೃಷಿಕ ತೀತಮಾಡ ಕೆ.ರಮೇಶ್, ಅಮ್ಮತ್ತಿ ಭತ್ತ ಬೆಳೆಗಾರ ಕೇಚಂಡ ಎಂ.ಕುಶಾಲಪ್ಪ, ಬೀರುಗ ಅಡಿಕೆ ಬೆಳೆಗಾರರಾದ ಅಜ್ಜಮಾಡ ಪ್ರಮೀಳಾ ಕರುಂಬಯ್ಯ ಹಾಗೂ ಎಪಿಎಂಸಿ ಹಿರಿಯ ಅಡಿಕೆ ವರ್ತಕ ಕೆ.ಕೆ.ಬೆಳ್ಯಪ್ಪ ಅವರನ್ನು ಗಣ್ಯರು ಇದೇ ಸಂದರ್ಭ ಸನ್ಮಾನಿಸಿದರು.