ಮಡಿಕೇರಿ, ಅ. 4: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಅಂತರರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವೈದ್ಯ ಡಾ. ಶಿವಕುಮಾರ್ ಅಂತರರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವ ಹಾಗೂ ಹೆಚ್‍ಐವಿ ಏಡ್ಸ್‍ನ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಸುನಿತಾ ಮುತ್ತಣ್ಣ ಯುವಜನತೆ ಮತ್ತು ಹೆಚ್‍ಐವಿ ಕುರಿತು ಮಾಹಿತಿ ನೀಡಿದರು. ಆರೋಗ್ಯದ ವಿಚಾರದಲ್ಲಿ ಯುವಜನತೆ ಎದುರಿಸುವ ಸಮಸ್ಯೆಗಳು ಯೌವನದಲ್ಲಿ ಬ್ರಹ್ಮಚರ್ಯೆ, ನಿಷ್ಠೆ, ಪ್ರಾಮಾಣಿಕತೆ, ಜೀವನ ಪಾಲನೆ ಹಾಗೂ ಅಸುರಕ್ಷತೆಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗದಿರುವಂತೆ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವ ಸಮಗ್ರ ಆಪ್ತ ಸಮಾಲೋಚನೆ ಮತ್ತು ಆರೋಗ್ಯ ಕೇಂದ್ರದ ನೆರವನ್ನು ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸುವಂತೆ ಹೆಚ್ಚಿನ ಮಾಹಿತಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1097 ರ ಸಹಾಯವನ್ನು ಪಡೆದುಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರೊ. ನಿರ್ಮಲಾ, ಕಾಲೇಜಿನ ಪ್ರಬಾರ ಪ್ರಾಂಶುಪಾಲ ಪ್ರೊ. ಕೆ.ಕೆ. ಮಹೇಶ್ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಮೀಳಾ ಹಾಗೂ ಉಷಾ ಭಾಗವಹಿಸಿದ್ದರು.
ಅಂತರರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗೂ ಹೆಚ್‍ಐವಿ ಏಡ್ಸ್ ಕುರಿತು ಘೋಷಣಾ ವಾಕ್ಯಗಳನ್ನು ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ತಶ್ಮಿತಾ, ಪ್ರಾರ್ಥನೆಯನ್ನು ಕವಿತಾ, ಸ್ವಾಗತವನ್ನು ಲಿಖಿತಾ ಹಾಗೂ ವಂದನಾರ್ಪಣೆಯನ್ನು ಅರ್ಪಿತಾ ನೆರವೇರಿಸಿದರು.
 
						