ಮಡಿಕೇರಿ: ವೀರಾಜಪೇಟೆ ತಾಲೂಕು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿ ವಿಭಾಗದಲ್ಲಿ ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಪೊನ್ನಂಪೇಟೆ ಸಿ.ಐ.ಟಿ. ಕಾಲೇಜಿನ ಮೈದಾನದಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಪಾಲಿಬೆಟ್ಟ ಕಾಲೇಜಿನ ಬಾಲಕರ ತಂಡವು ಸಾಯಿ ಶಂಕರ್ ಪದವಿಪೂರ್ವ ಕಾಲೇಜು, ಪೊನ್ನಂಪೇಟೆ, ಕಾವೇರಿ ಕಾಲೇಜು, ಗೋಣಿಕೊಪ್ಪಲು, ಸರಕಾರಿ ಪದವಿಪೂರ್ವ ಕಾಲೇಜು, ತಿತಿಮತಿ ಹಾಗೂ ಫೈನಲ್ ಪಂದ್ಯಾವಳಿಯಲ್ಲಿ ಸಿದ್ದಾಪುರ ಸಂಯುಕ್ತ ಪದವಿಪೂರ್ವ ಕಾಲೇಜಿನ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪಾಲಿಬೆಟ್ಟ ಕಾಲೇಜಿನ ದಿಲ್‍ಶಾದ್ ಉತ್ತಮ ರೈಡರ್ ಹಾಗೂ ಸಾಧಿಕ್ ಉತ್ತಮ ಕ್ಯಾಚರ್ ಎಂಬ ಪ್ರಶಸ್ತಿಗೆ ಭಾಜನರಾದರು.ಸುಂಟಿಕೊಪ್ಪ: ಮಂಗಳೂರಿನಲ್ಲಿ ನಡೆದ ವಿಭಾಗೀಯ ಮಟ್ಟದ ಬಾಲಕರ ಫುಟ್ಬಾಲ್ ಟೂರ್ನಿಯಲ್ಲಿ ಸುಂಟಿಕೊಪ್ಪದ ಸರ್ಕಾರಿ ಪ್ರೌಢಶಾಲಾ ಬಾಲಕರ ತಂಡ ಹಾಗೂ ಪ್ರಾಥಮಿಕ ಶಾಲಾ ಬಾಲಕರ ತಂಡವು ರನ್ನರ್ಸ್ ಆಫ್ ಆಗಿದ್ದಾರೆ.
ಮಂಗಳೂರಿನ ಬಜ್ಪೆ ಸೈಂಟ್ ಜೋಸೆಫ್ ಕಾಲೇಜು ಮೈದಾನದಲ್ಲಿ ಪ್ರಾಥಮಿಕ ಶಾಲಾ ಬಾಲಕರ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ವಿಭಾಗೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಬಾಲಕರ ಫೈನಲ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲಾ ತಂಡಗಳ ನಡುವೆ ನೇರ ಹಣಾಹಣಿ ನಡೆದು ಸುಂಟಿಕೊಪ್ಪ ಪ್ರೌಢಶಾಲಾ ಬಾಲಕರ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಸುಂಟಿಕೊಪ್ಪ ಪ್ರೌಢಶಾಲಾ ತಂಡದ ವ್ಯವಸ್ಥಾಪಕ ಸಿ.ಟಿ. ಸೋಮಶೇಖರ್, ದೈಹಿಕ ಶಿಕ್ಷಕ ಎಸ್.ಟಿ. ವೆಂಕಟೇಶ್ ಇದ್ದರು. ಮತ್ತೊಂದು ಪಂದ್ಯದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ತಂಡ ಹಾಗೂ ಮಂಡ್ಯ ಜಿಲ್ಲೆಯ ನಡುವೆ ನಡೆಯಿತು. 2 ತಂಡಗಳು ಬಾರಿ ಪೈಪೋಟಿಯನ್ನು ನೀಡಿ ಕೊನೆಯವರೆಗೂ ಸೆಣಸಾಡಿದರೂ ಗೋಲುಗಳಿಸುವಲ್ಲಿ ವಿಫಲವಾದವು. ನಂತರ ಟೈಬ್ರೇಕರ್‍ನಲ್ಲಿ ಸುಂಟಿಕೊಪ್ಪ ತಂಡವು 3-4 ಗೋಲುಗಳಿಂದ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ. ನಂದ ತರಬೇತಿ ನೀಡಿದ್ದರು.ಒಡೆಯನಪುರ: ಕೊಡ್ಲಿಪೇಟೆ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಹಾಗೂ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಆಯ್ಕೆಗೊಂಡಿದ್ದಾರೆ. ಮರಗೋಡಿನಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೊಡ್ಲಿಪೇಟೆ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಫೌತಿಮತ್ ಸಿಯಾನ ಬಾಲಕಿಯರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿನಿ ಕವನ ವಾಸು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಆಯ್ಕೆಗೊಂಡಿದ್ದಾರೆ. ನಾಟಕ ಸ್ಪರ್ಧೆಯಲ್ಲಿ ಇದೇ ಶಾಲೆಯ ಗೋಕರ್ಣ ಮತ್ತು ತಂಡದವರು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಛದ್ಮವೇಷ ಸ್ಪರ್ಧೆಯಲ್ಲಿ ಖ್ಯಾತಿ ವಿಶ್ವಾಸ್ ಮತ್ತು ಅರೇಬಿಕ್ ಧಾರ್ಮಿಕ ಪಠಣದಲ್ಲಿ ಮೊಹಮದ್ ಸಿಯಾಬ್ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಗೋಣಿಕೊಪ್ಪ ವರದಿ: ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಪಿ.ಯು. ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಕಬಡ್ಡಿ ಟೂರ್ನಿಯ ಬಾಲಕಿಯರಲ್ಲಿ ಶ್ರೀಮಂಗಲ ಪದವಿಪೂರ್ವ ಕಾಲೇಜು, ಬಾಲಕರಲ್ಲಿ ಸಿದ್ದಾಪುರ ಪದವಿಪೂರ್ವ ಕಾಲೇಜು ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಬಾಲಕಿಯರಲ್ಲಿ ದ್ವಿತೀಯ ಸ್ಥಾನವನ್ನು ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಪಿ.ಯು. ಕಾಲೇಜು ತಂಡ ಗೆದ್ದುಕೊಂಡಿತು. ಬಾಲಕರ ವಿಭಾಗದಲ್ಲಿ ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ಪಡೆದುಕೊಂಡಿತು. ವಿಜೇತರಿಗೆ ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ, ಸಿಐಟಿ ಪ್ರಾಂಶುಪಾಲೆ ಪಿ.ಸಿ. ಕವಿತಾ, ಪಿ.ಯು. ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಬಹುಮಾನ ವಿತರಣೆ ಮಾಡಿದರು.