ಸಿದ್ದಾಪುರ, ಅ. 3: ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ನಿರಾಶ್ರಿತರ ಮೇಲೆ ಕೆಲ ಸಂಘ-ಸಂಸ್ಥೆಗಳು ಬಡ್ಡಿ ಹಣವನ್ನು ಒತ್ತಾಯಪೂರ್ವಕವಾಗಿ ವಸೂಲಿ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ. ಸದಸ್ಯ ಕರ್ಪಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡಿಗೋಡು ಗ್ರಾಮದಲ್ಲಿ ಪ್ರವಾಹದಿಂದಾಗಿ ಜನತೆ ತತ್ತರಿಸಿದ್ದು, ಕೆಲ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚು ಬಡ್ಡಿ ದರದಲ್ಲಿ ಸಾಲ ನೀಡಿ, ಪ್ರತಿ ವಾರ ಮರುಪಾವತಿಗೆ ಒತ್ತಾಯ ಮಾಡುತ್ತಿದ್ದಾರೆ. ಒಂದೆಡೆ ಪ್ರವಾಹದಿಂದ ಜೀವನ ಕಳೆದುಕೊಂಡಿರುವ ನಿರಾಶ್ರಿತರು ಬಡ್ಡಿ ದಂಧೆಯಿಂದ ತತ್ತರಿಸಿದ್ದಾರೆ. ಕರಡಿಗೋಡುವಿನ ಸಂಘದ ಸದಸ್ಯರೊಬ್ಬರು ಹಾಗೂ ಅವರ ಪತಿ ಸೆ.30 ಸಂಜೆ ಕರಡಿಗೋಡುವಿನ ರಾಧಿಕ ಹಾಗೂ ಟಿ.ಕೆ. ಅನಿಲ್ ಕುಮಾರ್ ಅವರ ಮನೆಗೆ ತೆರಳಿ ಬಲವಂತವಾಗಿ ಹಣ ನೀಡಲು ತಿಳಿಸಿದ್ದು, ಹಣ ನೀಡದ ಹಿನ್ನೆಲೆ ಗೂಂಡಾಗಿರಿ ವರ್ತನೆ ತೋರಿದ್ದಾರೆ. ಅನಿಲ್ ಕುಮಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಹೆಚ್ಚು ಬಡ್ಡಿ ದರದಲ್ಲಿ ಸಾಲ ನೀಡಿ, ಪ್ರವಾಹ ಸಂತ್ರಸ್ತರಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸುತ್ತಿರುವ ಸಂಘ-ಸಂಸ್ಥೆಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಪ್ರೇಮನ್, ವಾಸು, ರಂಗನಾಥ್, ಕೆ.ಕೆ ರಘು ಇದ್ದರು.