ಕೂಡಿಗೆ, ಅ. 3: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿಯ ಪಾರ್ವತಮ್ಮ ಎಂಬವರಿಗೆ ಪರಿಶಿಷ್ಟ ಪಂಗಡದಿಂದ ಮನೆ ಕಟ್ಟಿಕೊಳ್ಳಲು ಅಧಿಕಾರಿ ವರ್ಗದವರು ಹಿಂದೇಟು ಹಾಕುತ್ತಿದ್ದಾರೆ. ಪಾರ್ವತಮ್ಮ ಅವರ ಪತಿಯೂ ಮೃತಪಟ್ಟಿದ್ದು, ಮಗನು ಕಳೆದ ಒಂದು ವರ್ಷದಿಂದ ಪಾಶ್ರ್ವವಾಯು ರೋಗಕ್ಕೆ ತುತ್ತಾಗಿದ್ದಾರೆ. ಇರುವ ಮನೆಯ ಒಂದು ಭಾಗ ಅತಿಯಾದ ಮಳೆಯಿಂದ ಗೋಡೆ ನೆಲಸಮವಾಗಿದ್ದು, ಇಡೀ ಮನೆಯೇ ಬೀಳುವ ಹಂತದಲ್ಲಿದೆ. ಬೀಳುವ ಹಂತದಲ್ಲಿರುವ ಮನೆಯ ಮೇಲೆ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿದೆ.
ಗುಡಿಸಲು ಮುಕ್ತ ಗ್ರಾಮವನ್ನಾಗಿಸುವ ಯೋಜನೆಯು ಇಲ್ಲಿಗೆ ಅನ್ವಯಿಸಿಲ್ಲ ಎಂಬಂತೆ ಕಾಣುತ್ತಿದೆ. ಕೂಲಿ ಮಾಡಿ ಜೀವನ ಸಾಗಿಸುವ ಪಾರ್ವತಮ್ಮ ಅವರ ಮನೆ ಯಾವದೇ ಸಮಯದಲ್ಲಿ ಬೀಳಬಹುದು ಎಂಬ ಭಯದಿಂದ ದಿನ ಕಳೆಯುತ್ತಿದ್ದಾರೆ.
ಈ ಬಗ್ಗೆ ದೂರು ಬಂದ ಹಿನ್ನೆಲೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಪಾರ್ವತಮ್ಮ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮನೆಯನ್ನು ನಿರ್ಮಾಣ ಮಾಡಿಕೊಡಲು ಆದೇಶಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.