ಮಡಿಕೇರಿ, ಅ. 3: ಮಡಿಕೇರಿ ದಸರಾ ಉತ್ಸವ ಸಂಬಂಧ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ದಶಮಂಟಪಗಳಿಗೆ ಸರ್ಕಾರದಿಂದ ಅನುದಾನ ಕಲ್ಪಿಸುವಂತೆ ಮನವಿ ಮಾಡುವ ನಿಟ್ಟಿನಲ್ಲಿ ದಶಮಂಟಪ ಸಮಿತಿ ಪ್ರತ್ಯೇಕವಾಗಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿರುವದಾಗಿ ‘ಶಕ್ತಿ’ಗೆ ಮೂಲಗಳಿಂದ ತಿಳಿದು ಬಂದಿದೆ.

ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ದಿನ ದಶಮಂಟಪಗಳ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವದಾಗಿ ಹೇಳಲಾಗಿದೆ. ಉಸ್ತುವಾರಿ ಸಚಿವರು ಮಾತ್ರವಲ್ಲದೆ ಜಿಲ್ಲಾಧಿಕಾರಿಗಳಿಗೂ ಅಹವಾಲು ಸಲ್ಲಿಸಲು ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ. ಸರಳ ದಸರಾ ಆಚರಿಸುವದಕ್ಕೂ ಅನುದಾನದ ಅವಶ್ಯಕತೆಯಿದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗದ ಪರಿಸ್ಥಿತಿ ಕೊಡಗಿನಲ್ಲಿ ನಿರ್ಮಾಣವಾಗಿದೆ. ಹೀಗಿದ್ದಾಗ್ಯೂ ದಸರಾ ಸಮಿತಿ ಇದುವರೆಗೂ ಮಂಟಪಗಳಿಗೆ ಅನುದಾನ ಒದಗಿಸುವ ನಿಟ್ಟಿನಲ್ಲಿ ಯಾವದೇ ಪ್ರಯತ್ನ ನಡೆಸುತ್ತಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿರುವದಾಗಿ ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ.