ಶನಿವಾರಸಂತೆ, ಅ. 3: ಯಸಳೂರು ಹೋಬಳಿ ಉಚ್ಚಂಗಿಯಿಂದ (ಕೆ.ಎ. 09 ಬಿ. 4571) ಟಾಟಾ ಮಿನಿಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 1.50 ಲಕ್ಷ ಬೆಲೆ ಬಾಳುವ ಮರದ ದಿಮ್ಮಿಗಳನ್ನು ಹಾಗೂ ರೂ. 10 ಲಕ್ಷ ಬೆಲೆ ಬಾಳುವ ವಾಹನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಶನಿವಾರಸಂತೆ ಅರಣ್ಯ ವಲಯಾಧಿಕಾರಿಯಾದ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕರಿಬಸರಿ, ಹವಳಿಗೆ, ಮಾವು, ಸಂಪಿಗೆ ಮರದ ದಿಮ್ಮಿಗಳನ್ನು ಮಿನಿಲಾರಿಯಲ್ಲಿ ತುಂಬಿಸಿಕೊಂಡು ಇಂದು ಬೆಳಗ್ಗಿನ ಜಾವ 4 ಗಂಟೆಗೆ ಶನಿವಾರಸಂತೆ ಮಾರ್ಗವಾಗಿ ಅರಕಲಗೋಡಿಗೆ ಸಾಗಿಸುತ್ತಿರುವಾಗ ಧಾಳಿ ಮಾಡಿ ಕಿತ್ತೂರು ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಮಾಲೀಕ ಉಚ್ಚಂಗಿ ನಾಗರಾಜ್, ಚಾಲಕ ದುಂಡಳ್ಳಿ ಗ್ರಾಮದ ರಾಜು ಅವರುಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್, ಉಪ ಅರಣ್ಯವಲಯಾಧಿಕಾರಿ ಶ್ರೀನಿವಾಸ್, ಅರಣ್ಯ ರಕ್ಷಕರುಗಳಾದ ಲೋಕೇಶ್, ಜಯಕುಮಾರ್ ಹಾಗೂ ಚಾಲಕ ಹರೀಶ್‍ಕುಮಾರ್ ಪಾಲ್ಗೊಂಡಿದ್ದರು.