ಸೋಮವಾರಪೇಟೆ, ಅ. 3: ಪಶ್ಚಿಮಘಟ್ಟ ಪ್ರದೇಶಕ್ಕೆ ಒತ್ತಿಕೊಂಡಿರುವ, ನಿತ್ಯಹರಿದ್ವರ್ಣದಿಂದ ಕಂಗೊಳಿಸುತ್ತಿದ್ದ ಸೂರ್ಲಬ್ಬಿ ನಾಡಿನ ಜನರ ಬದುಕು ಮಳೆ ಪ್ರವಾಹ ಇಳಿದರೂ ಸಹ ಹಿಡಿತಕ್ಕೆ ಸಿಗುತ್ತಿಲ್ಲ. ಮಹಾಮಳೆಗೆ ಬದುಕು ದುಸ್ತರಗೊಂಡಿದ್ದು, ಅನಾದಿಕಾಲದಿಂದಲೂ ಕೈಹಿಡಿದಿದ್ದ ಕೃಷಿ ಕೈಗೆ ನಿಲುಕದಂತಾಗಿದೆ.

ಈ ಭಾಗದ ಮಂದಿ ಇದುವರೆಗೂ ಕೃಷಿಯಿಂದಲೇ ಜೀವನ ಕಂಡುಕೊಂಡಿದ್ದರು. ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದರೂ ಸಹ ಸರ್ಕಾರದ ಪರಿಹಾರಕ್ಕೆ ಅಷ್ಟಾಗಿ ಅರ್ಜಿ ಸಲ್ಲಿಸುತ್ತಿರಲಿಲ್ಲ. ಆದರೆ ಪ್ರಸಕ್ತ ಸಾಲಿನ ಪ್ರಕೃತಿ ವಿಕೋಪ ಈ ಭಾಗದ ಜನರ ಆಸ್ತಿಯನ್ನೂ ನುಂಗಿ ಹಾಕಿದೆ. ಕೃಷಿ ಫಸಲು ಇನ್ನಿಲ್ಲದಂತೆ ಮಾಯವಾಗಿದ್ದು, ಹಿಂದಿನಂತೆ ಬದುಕು ಕಟ್ಟಿಕೊಳ್ಳಲು ಕೆಲ ವರ್ಷಗಳೇ ಬೇಕಾಗಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಸೂರ್ಲಬ್ಬಿ ನಾಡಿನ ಜನರು ಆಸ್ತಿ ದಾಖಲೆಗಳ ಸಮಸ್ಯೆಯಿಂದ ಬೆಳೆ ಹಾನಿ ಪರಿಹಾರದಿಂದಲೂ ವಂಚಿತರಾಗುತ್ತಿದ್ದಾರೆ. ಮಂಕ್ಯಾ, ಕಿಕ್ಕರಳ್ಳಿ, ಕಿರಿದಾಲೆ, ಗರ್ವಾಲೆ, ಕುಂಬಾರಗಡಿಗೆ, ಹಮ್ಮಿಯಾಲ, ಮುಟ್ಲು ಗ್ರಾಮಗಳಲ್ಲಿ ವಾಸಮಾಡುತ್ತಿರುವವರಿಗೆ ಜಮ್ಮಾ ಭೂಮಿಯಿದ್ದು, ಕುಟುಂಬದ ಸದಸ್ಯರ ಹೆಸರುಗಳು ಜಂಟಿ ಖಾತೆಯಲ್ಲಿವೆ. ಆರ್‍ಟಿಸಿಗಳಲ್ಲಿ 20 ರಿಂದ 50 ಮಂದಿಯ ಹೆಸರುಗಳಿರುತ್ತವೆ. ಆದರೆ ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಹೀಗೆ ಪ್ರತ್ಯೇಕವಾಗಿರುವ ಕುಟುಂಬಗಳಿಗೆ ಪ್ರತ್ಯೇಕ ಆರ್‍ಟಿಸಿ ಲಭಿಸಿಲ್ಲ. ವಿಧವೆಯಾಗಿರುವ ಮಹಿಳೆಯರ ಹೆಸರುಗಳು ತಮ್ಮ ಭೂಮಿಯ ಖಾತೆಗಳಲ್ಲಿ ಸೇರ್ಪಡೆಯಾಗಿಲ್ಲ. ಬೆಳೆ ಹಾನಿ ಪರಿಹಾರಕ್ಕೆ ಕಂದಾಯ ಇಲಾಖೆ ಆರ್‍ಟಿಸಿ ಕೇಳುತ್ತಿರುವದರಿಂದ, ಹೆಚ್ಚಿನ ಕುಟುಂಬಗಳು ಪರಿಹಾರದಿಂದ ದೂರವೇ ಉಳಿಯುವಂತಾಗಿದೆ.

ಈ ಭಾಗದಲ್ಲಿ ಭಾರೀ ಮಳೆಗೆ ಗದ್ದೆಗಳು ಭೂಕುಸಿತಕ್ಕೊಳಗಾಗಿ ಕೃಷಿಗೆ ಅಸಾಧ್ಯವಾಗಿ ಪರಿಣಮಿಸಿವೆ. ಗದ್ದೆಯ ಮೇಲೆ ಮಣ್ಣು, ಮರಳು ಶೇಖರಣೆಗೊಂಡಿದ್ದು, ತಾವೇ ಬೆಳೆದ ಅಕ್ಕಿಯನ್ನು ಬಳಸುತ್ತಿದ್ದ ಮಂದಿ ಅಂಗಡಿಗಳ ಮೊರೆ ಹೋಗಬೇಕಾಗಿದೆ. ಈ ಭಾಗದ ಮಂದಿಗೆ ಸರ್ಕಾರದ 3800 ರೂ.ಗಳು, ಆಹಾರದ ಕಿಟ್ ಹೊರತುಪಡಿಸಿ ಬೇರೆ ಯಾವ ಪರಿಹಾರ ಕೈಸೇರಿಲ್ಲ.

ಹಮ್ಮಿಯಾಲ, ಮುಟ್ಲು, ಕುಂಬಾರಗಡಿಗೆ ಗ್ರಾಮಗಳಲ್ಲಿ ಜನರು ಆಹಾರ ಸಾಮಗ್ರಿಗಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಶೇಖರಿಸಿಟ್ಟಿದ್ದ ಭತ್ತ, ಏಲಕ್ಕಿಯನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ವರ್ಷ ಪೂರ್ತಿ ಕೈಹಿಡಿಯುತ್ತಿದ್ದ ತರಕಾರಿ ಬೆಳೆಗಳು ಈ ಬಾರಿ ಕೈ ಹಿಡಿದಿಲ್ಲ. ಹಾಲು ಕೊಡುತ್ತಿದ್ದ ಹಲವಷ್ಟು ಜಾನುವಾರುಗಳೂ ಸಹ ಅತಿಯಾದ ಶೀತದಿಂದ ಸಾವನ್ನಪ್ಪಿವೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ಹೂಳು ತುಂಬಿ ನಾಶವಾಗಿರುವ ಒಂದು ಹೆಕ್ಟೇರ್ ಗದ್ದೆ ಭೂಮಿಗೆ ರೂ. 12,200 ಪರಿಹಾರ ಸಿಗುತ್ತದೆ. ಭೂಕುಸಿತಗೊಂಡ ಕೃಷಿ ಭೂಮಿಗೆ ಹೆಕ್ಟೇರ್‍ವೊಂದಕ್ಕೆ ರೂ. 37,500, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಗೆ ಹೆಕ್ಟೇರ್‍ಗೆ ರೂ. 6,800. ಅಡಿಕೆ, ಕಾಳುಮೆಣಸು, ಕಿತ್ತಳೆ, ಏಲಕ್ಕಿ, ಕಾಫಿ, ವೆನಿಲ್ಲಾ ಬೆಳೆಗಳು ನಾಶವಾಗಿದ್ದರೆ ಹೆಕ್ಟೇರ್‍ಗೆ ರೂ. 18 ಸಾವಿರ ಪರಿಹಾರ ಸಿಗಲಿದೆ.

ಇದೇ ಮಾನದಂಡದಡಿ ಪರಿಹಾರ ವಿತರಿಸುವದಾದರೆ ಬಹುತೇಕ ಕುಟುಂಬಗಳಿಗೆ ತಲಾ ರೂ. 1000 ಪರಿಹಾರವೂ ಲಭಿಸುವದಿಲ್ಲ. ಈ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಓಡಾಡುವ ಖರ್ಚು ರೂ. 500 ದಾಟುತ್ತದೆ. ನಾಲ್ಕೈದು ದಿನ ಕೆಲಸವನ್ನು ಬಿಟ್ಟು ಓಡಾಡಬೇಕು. ನಮ್ಮ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈ ಭಾಗದಲ್ಲಿರುವ ಮಂದಿಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಯನ್ನೇ ದಾಖಲೆಯನ್ನಾಗಿ ಇಟ್ಟುಕೊಂಡು ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಕುಂಬಾರಗಡಿಗೆ ಗ್ರಾಮದ ಕನ್ನಿಕಂಡ ಜಾನಕಿ, ರಾಣಿ, ಈರಪ್ಪ, ಚೊಲ್ಲಂಡ ಬೊಳ್ಳವ್ವ, ಗೌಡಂಡ ನೀಲಮ್ಮ, ಜಯಂತಿ ಸೇರಿದಂತೆ ಇತರರು ಅಭಿಪ್ರಾಯಿಸಿದ್ದಾರೆ.