ವೀರಾಜಪೇಟೆ, ಅ. 3: ಪ್ರತಿ ಬುಧವಾರ ಹಾಗೂ ತಿಂಗಳಿಗೊಮ್ಮೆ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯನ್ನು ನಡೆಸಲಾಗುವದು ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯ ಸಭಾಂಗಣಕ್ಕೆ ದಿಢೀರ್ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸಿದ ಅವರು, ಬಹುತೇಕ ಸಮಸ್ಯೆಗಳು ಕಂದಾಯ ಹಾಗೂ ಸರ್ವೆ ಇಲಾಖೆಗೆ ಸಂಬಂಧಿಸಿದ ಕಾರಣ ಎಡಿಎಲ್‍ಆರ್, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ (ಮೊದಲ ಪುಟದಿಂದ) ಅವರುಗಳನ್ನು ಶಾಸಕ ಬೋಪಯ್ಯ ತರಾಟೆಗೆ ತೆಗೆದುಕೊಂಡರು. ಶಿರಾಸ್ತೆದಾರ್ ಕೆ.ಎಂ ಚಿಣ್ಣಪ್ಪ ಅವರ ಕಾರ್ಯ ವೈಖರಿಯ ಬಗ್ಗೆ ಗರಂ ಆದ ಶಾಸಕರು ಕೂಡಲೆ ಅವರನ್ನು ಆ ಸ್ಥಾನದಿಂದ ತೆರವುಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕೇಚಂಡ ಕುಶಾಲಪ್ಪ ಮಾತನಾಡಿ ಇಡೀ ತಾಲೂಕು ಕಚೇರಿ ಭ್ರಷ್ಟಾಚಾರದಿಂದ ಗಬ್ಬೆದ್ದು ಹೋಗಿದೆ, ಇಲ್ಲಿ ಹಣ ನೀಡಿದರೂ ಯಾವದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕಂದಾಯ ಇಲಾಖೆಯಲ್ಲಿ ನೂರಾರು ಕಡತಗಳು ಬಾಕಿ ಇದೆ. ಉಳಿದಂತೆ ಭೂಮಿ, ಕಂಪ್ಯೂಟರ್ ಹಾಗೂ ಸರ್ವೆ ವಿಭಾಗದಲ್ಲಿ ಸಾವಿರಾರು ಕಡತಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ರೆಕಾರ್ಡ್ ರೂಮ್‍ನಲ್ಲಿ ಹಳೆಯ ನಕಾಶೆಗಳಿಲ್ಲ. ಮೂಲ ಕಡತಗಳಿಲ್ಲ ಎಂದು ಹಿಂಬರಹ ನೀಡುತ್ತಾರೆ. ಎಡಿಎಲ್‍ಆರ್ ಅವರು ನಾಲ್ಕು ತಿಂಗಳಿಂದ ಬರುತ್ತಿಲ್ಲ ಅಧಿಕಾರಿಗಳೇ ಈ ರೀತಿ ಮಾಡಿದರೆ ರೈತರ ಪಾಡೇನು ಎಂದು ಪ್ರಶ್ನಿಸಿದರು.
ಕಾನೂರಿನ ಅಳಮೇಂಗಡ ಬೋಪಯ್ಯ ಮಾತನಾಡಿ 6.10.2009 ರಲ್ಲಿ ಆರ್‍ಟಿಸಿಯಲ್ಲಿ ಮರಣ ಹೊಂದಿದ ತಂದೆಯ ಹೆಸರನ್ನು ತಪ್ಪಾಗಿ ನಮೂದಿಸಿ ತಿದ್ದುಪಡಿ ಮಾಡಲಾಗಿದೆ. ತಂದೆಯ ಮರಣ ನಂತರ ಅವರ ಹೆಸರನ್ನು ಆರ್‍ಟಿಸಿಯಿಂದ ತೆಗೆಯಲು 2013ರಲ್ಲಿ ಎಲ್ಲಾ ದಾಖಲಾತಿಯೊಂದಿಗೆ ಕಂದಾಯ ಅದಾಲತ್‍ನಲ್ಲಿ ಲಿಖಿತ ಅರ್ಜಿ ನೀಡಲಾಗಿದೆ. ಈವರೆಗೆ ಕಚೇರಿಗೆ ಅಲೆದು ಅಲೆದು ಸಾಕಾಗಿದೆ ಎಂದು ದೂರಿದರು.
ಹುದಿಕೇರಿಯ ಕೆ.ಎ ಗಣಪತಿ ಮಾತನಾಡಿ ನನಗೆ ಸೇರಿದ ಜಾಗಕ್ಕೆ ಎಲ್ಲಾ ದಾಖಲಾತಿಗಳು ನೀಡಿದರೂ ಕಳೆದ 4 ವರ್ಷದಿಂದ ಕಂದಾಯ ನಿಗದಿ ಮಾಡಿಲ್ಲ. ವೆಸ್ಟ್ ನೆಮ್ಮಲೆಯ ಚಟ್ಟಂಗಡ ಮಾಚಯ್ಯ ಮಾತನಾಡಿ ಸರ್ವೆ ಸಂಖ್ಯೆ 77/1ರಲ್ಲಿರುವ ಜಾಗವನ್ನು ಮೂರು ಬಾರಿ ಸರ್ವೆ ಮಾಡಿದ್ದಾರೆ. ಒಂದಕ್ಕೊಂದು ತಾಳೆ ಬರುತ್ತಿಲ್ಲ. ಜಾಗಕ್ಕೆ ಸಂಬಂಧ ಪಡದವರು ಬಂದು ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ನನಗೆ ಹದ್ದುಬಸ್ತು ಸರ್ವೆ ಮಾಡಿಸಿಕೊಡಿ ಎಂದು ದೂರು ನೀಡಿದಾಗ ಕೋಪಗೊಂಡ ಶಾಸಕರು ಕೆಲವು ಸಿಬ್ಬಂದಿಗಳ ಮೇಲೆ ಹರಿಹಾಯ್ದು ಬಾಕಿ ಉಳಿಸಿಕೊಂಡಿರುವ ಕಡತಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥ ಮಾಡುವಂತೆ ಸೂಚಿಸಿದರು.
ಇಡೀ ತಾಲೂಕು ಕಚೇರಿ ನಿಮ್ಮಿಂದ ಹಾಳಾಗುತ್ತಿದೆ. ನಿಮ್ಮ ಮೇಲೆ ನನಗೆ ವ್ಯೆಯುಕ್ತಿಕ ದ್ವೇಷ ಇಲ್ಲ. ಜನರಿಗೆ ಕಿರುಕುಳ ನೀಡುವ ಬಗ್ಗೆ ಪ್ರತಿದಿನ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಜನರೊಂದಿಗೆ ಸೌಜನ್ಯವಾಗಿ ವರ್ತಿಸದ ಚಿಣ್ಣಪ್ಪ ಅವರನ್ನು ಕೂಡಲೆ ಶಿರಸ್ತೆದಾರ್ ಹುದ್ದೆಯಿಂದ ತೆರವುಗೊಳಿಸಿ. ‘ಹೀ ಹ್ಯಾಸ್ ಟು ಬಿ ಚೇಂಜ್‍ಡ್’ ಎಂದು ಉಪವಿಭಾಗಾಧಿಕಾರಿಗೆ ಕೆಜಿಬಿ ಸೂಚಿಸಿದರು.
ಜನರಿಗೆ ಸಮಸ್ಯೆ ಆಗಿದೆ ಇಲ್ಲ ಎಂದು ಹೇಳುವದಿಲ್ಲ. ಒಳ್ಳೆಯ ಉದ್ದೇಶದಿಂದಲೇ ಕಡತ ವಿಲೇವಾರಿ ವಿಳಂಬವಾಗಿದೆ.. ಏಕೆಂದರೆ ನನ್ನ ಹೆಸರು ಹೇಳಿಕೊಂಡು ಅನೇಕ ಜನರು ಹಣ ಪಡೆದುಕೊಂಡಿದ್ದಾರೆ. ಶಾಸಕರು ಹಾಗೂ ಅಧಿಕಾರಿಗಳ ಎದುರು ಎಲ್ಲಿಯಾದರು ನಾನು ಹಣ ಪಡೆದುಕೊಂಡಿದ್ದೇನೆ ಎಂದು ರುಜುವಾತು ಮಾಡಿದರೆ ಆ ಕ್ಷಣದಿಂದ ನಾನು ಮನೆಗೆ ಹೋಗುತ್ತೇನೆ ಎಂದು ಎಡಿಎಲ್‍ಆರ್ ಷಂಶುದ್ದೀನ್ ನುಡಿದರು.
ಆಕಾರಬಂದು ಹಾಗೂ ಆರ್‍ಟಿಸಿ ಎರಡಕ್ಕೂ ಹೊಂದಾಣಿಕೆ ಇದ್ದರೆ ಮಾತ್ರ ಕಂದಾಯ ನಿಗದಿ ಮಾಡಲು ಸಾಧ್ಯ. ಬಹುತೇಕ ಕಡತಗಳು ಹೊಂದಾಣಿಕೆ ಆಗುತ್ತಿಲ್ಲ. ಜಂಟಿ ಇದ್ದ ಕಡೆಗಳಲ್ಲಿ ಬೇರೆ ಬೇರೆ ಮಾಡಿ ಕಂದಾಯ ನಿಗದಿ ಮಾಡಬೇಕಾಗುತ್ತದೆ. ತಹಶೀಲ್ದಾರ್ ಕಚೇರಿಯಲ್ಲಿ ಆಗುವಂತಹ ಕೆಲಸಗಳನ್ನು ಇಲ್ಲಿಯೇ ತ್ವರಿತ ಗತಿಯಲ್ಲಿ ಮಾಡಲು ಆದೇಶಿಸಿದ್ದೇನೆ. ನಮ್ಮ ಕಚೇರಿಯಲ್ಲಿ ಆಗುವಂತಹ ಕೆಲಸವನ್ನು ನಾನು ಕೂಡಲೇ ಮಾಡಿ ಕಳುಹಿಸುತ್ತೇನೆ ಎಂದು ಉಪವಿಭಾಗಾಧಿಕಾರಿ ಜವರೇಗೌಡ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ಚಲನ್, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ಭವ್ಯ, ಮುಖಂಡರಾದ ಗಿರೀಶ್ ಗಣಪತಿ, ರಘುನಾಣಯ್ಯ, ಚೋಟು ಕಾವೇರಪ್ಪ, ಅರುಣ್ ಭೀಮಯ್ಯ, ಚೇಂಬರ್ ಆಫ್ ಕಾಮರ್ಸ್‍ನ ಮಾದಪಂಡ ಕಾಶಿ ಕಾವೇರಪ್ಪ, ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು. -ಡಿಎಂಆರ್