ಮಡಿಕೇರಿ, ಅ. 3: ಕೊಲೆ ಹಾಗೂ ಸುಲಿಗೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೋರ್ವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸೋಮವಾರಪೇಟೆ ತಾಲೂಕಿನ ಗರ್ವಾಲೆಯ ನಿವಾಸಿ ತಂಬುಕುತ್ತಿರ ಪೂವಯ್ಯ ಎಂಬವರು ಈ ಆರೋಪದಂತೆ ಶಿಕ್ಷೆಗೆ ಗುರಿಯಾಗಿದ್ದಾರೆ.
ದಿನಾಂಕ 30.12.2016 ರಂದು ಸೋಮವಾರಪೇಟೆ ಗರ್ವಾಲೆ ಗ್ರಾಮದಲ್ಲಿ 68 ವರ್ಷ ಪ್ರಾಯದ ಬೊಳ್ಳಿಯವ್ವ ಎಂಬವರು ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಸಂಜೆ 7.30ರ ಸಮಯದಲ್ಲಿ ಆರೋಪಿ ತಂಬುಕುತ್ತಿರ ಪೂವಯ್ಯ ಅಲ್ಲಿಗೆ ಹೋಗಿ ಬೊಳ್ಳಿಯವ್ವ ಅವರ ಕಿವಿಯ ಓಲೆ, ಕುತ್ತಿಗೆಯಲ್ಲಿದ್ದ ಚಿನ್ನದ ಚೈನನ್ನು ಬಿಚ್ಚಿಕೊಂಡು ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ, ಕೊಲೆಯನ್ನು ಮುಚ್ಚಿ ಹಾಕಲು ಸ್ವಾಭಾವಿಕವಾಗಿ ಸತ್ತಂತೆ ಬಿಂಬಿಸುವ ಸಲುವಾಗಿ ಮೃತ ದೇಹವನ್ನು ಎತ್ತಿಕೊಂಡು ಹೋಗಿ ಆಕೆಯ ರೂಮಿನ ಮಂಚದ ಮೇಲೆ ಅಂಗಾತವಾಗಿ ಮಲಗಿಸಿದ್ದಾನೆ. ಬಳಿಕ ಕೊಠಡಿಯ ಪೆಟ್ಟಿಗೆಯಲ್ಲಿದ್ದ ರೂ. 3 ಸಾವಿರ ಹಣವನ್ನು ದೋಚಿಕೊಂಡು ಹೋಗಿರುವದಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಪ್ರಕರಣವು ಸಾಬೀತಾಗಿದ್ದರಿಂದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿ ಇಲ್ಲಿ ನಡೆದಿದ್ದು, ಆರೋಪಿ ಪೂವಯ್ಯ ಕೊಲೆ ಮಾಡಿರುವದು ಸಾಕ್ಷಿಗಳ ವಿಚಾರಣೆಯಿಂದ ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಡಿ. ಪವನೇಶ್ ಪ್ರಕಟಿಸಿದ್ದಾರೆ. ನ್ಯಾಯಾಧೀಶರು ಸದರಿ ಆರೋಪಿಗೆ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಮತ್ತು ರೂ. 7,500 ದಂಡವನ್ನು, ಸಾಕ್ಷಿ ನಾಶ ಮಾಡಲು ಯತ್ನಿಸಿದ ಅಪರಾಧಕ್ಕಾಗಿ 5 ವರ್ಷ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡವನ್ನು ಹಾಗೂ ದರೋಡೆ ಮಾಡಿದ ಅಪರಾಧಕ್ಕಾಗಿ 7 ವರ್ಷಗಳ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡವನ್ನು ಪಾವತಿಸುವಂತೆ ತೀರ್ಪು ನೀಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಸರಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ಅವರು ನಡೆಸಿದ್ದಾರೆ. ವಸೂಲಾಗುವ ದಂಡದ ಹಣದಲ್ಲಿ ರೂ. 12,500 ಅನ್ನು ಮೃತಳ ಮಗ ಫಿರ್ಯಾದುದಾರನಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.