ಕುಶಾಲನಗರ, ಅ. 3 ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ನದಿ ನೀರಿನ ಪ್ರವಾಹದಲ್ಲಿ ಸಂತ್ರಸ್ತರಾದ ಜನರಿಗೆ ಪರಿಹಾರ ನೀಡುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದು ದೂರುಗಳು ಕೇಳಿಬಂದಿವೆ. ಆಗಸ್ಟ್ ತಿಂಗಳಲ್ಲಿ ಕುಶಾಲನಗರ, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ ಮತ್ತು ಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಅಂದಾಜು 400 ಮನೆಗಳು ನೀರಿನಿಂದ ಆವೃತ ಗೊಂಡಿದ್ದು ಸಂತ್ರಸ್ತರಿಗೆ ಸರಕಾರದ ಆದೇಶ ದನ್ವಯ ನೀಡಬೇಕಾದ ಪರಿಹಾರ ಕೆಲವೆಡೆ ಮಾತ್ರ ವಿತರಿಸಲಾಗಿದೆ.

ಪೂರ್ಣಹಾನಿಗೊಂಡ ಮನೆ ಮಾಲೀಕರಿಗೆ ಮತ್ತು ಕುಶಾಲನಗರ ಪಟ್ಟಣದ ಮನೆ ಮಾಲೀಕರಿಗೆ ಪರಿಹಾರ ಧನ ರೂ. 3800 ವಿತರಿಸಲಾಗಿದ್ದರೂ ಉಳಿದಂತೆ ಗ್ರಾಮ ವ್ಯಾಪ್ತಿಗಳಲ್ಲಿ ಇನ್ನೂ ವಿತರಣೆಯಾಗಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಉಳಿದಂತೆ ರೂ. 50 ಸಾವಿರ ವಿತರಿಸಲು ಸರಕಾರದಿಂದ ಆದೇಶ ಹೊರಡಿಸಿದರೂ ಅಧಿಕಾರಿಗಳು ವಿತರಿಸುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ.

ಇತ್ತ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ 70 ಕ್ಕೂ ಅಧಿಕ ಮನೆಗಳು ಕಾವೇರಿ ಮತ್ತು ಹಾರಂಗಿ ನೀರಿನಿಂದ ಮುಳುಗಿದ್ದು ಹಾನಿಗೊಂಡ ಮನೆಗಳ ಸಂತ್ರಸ್ತರಿಗೆ ನೀಡಬೇಕಾದ ಮೊತ್ತ ರೂ. 3800 ಇನ್ನೂ ವಿತರಣೆಯಾಗಿಲ್ಲ. ರಾಜ್ಯ ಸರಕಾರ ಈ ಬಗ್ಗೆ ಆದೇಶ ಹೊರಡಿಸಿದ್ದರೂ ಮೈಸೂರು ಜಿಲ್ಲಾಧಿಕಾರಿಗಳು ವಿತರಿಸುವಲ್ಲಿ ನಿರ್ಲಕ್ಷ್ಯ ತಾಳಿರುವ ಬಗ್ಗೆ ಅಲ್ಲಿನ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪರ್ಕಕ್ಕೂ ದೊರಕದ ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಬಗ್ಗೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಕುಶಾಲನಗರ ಪಂಚಾಯಿತಿ ವ್ಯಾಪ್ತಿಯ ದಂಡಿನಪೇಟೆ ಮನೆಗಳಿಗೆ ಶಾಸಕರು ಭೇಟಿ ನೀಡಿದ ಸಂದರ್ಭ ಮುಖ್ಯಾಧಿಕಾರಿ ಸುಜಯ್ ಕುಮಾರ್ ಸ್ಥಳದಲ್ಲಿ ಹಾಜರಿರಲಿಲ್ಲ. ಈ ಸಂದರ್ಭ ಸಂತ್ರಸ್ತರು ತಮಗೆ ಇನ್ನೂ ಪರಿಹಾರ ದೊರಕಿಲ್ಲ ಎನ್ನುವ ಬಗ್ಗೆ ಶಾಸಕರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು. ಮುಖ್ಯಾಧಿಕಾರಿಗಳನ್ನು ಹಲವು ಬಾರಿ ದೂರವಾಣಿ ಮೂಲಕ ಪ್ರಯತ್ನಿ ಸಿದರೂ ಸಂಪರ್ಕಕ್ಕೆ ದೊರಕದೆ ಇರುವ ಘಟನೆ ನಡೆಯಿತು.