ಮಡಿಕೇರಿ, ಅ. 3: ವ್ಯಕ್ತಿಯೋರ್ವ ಉತ್ತಮವಾಗಿ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸುವ ಚೆಂದದ ಬಟ್ಟೆ ತಯಾರಿಸುವ ದರ್ಜಿಗಳೇ ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭ ಇವರ ನೆರವಿಗೆ ರಾಜ್ಯವ್ಯಾಪಿಯ ಟೈಲರ್‍ಗಳು ಮುಂದಾಗಿರುವದು ಶ್ಲಾಘನೀಯ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ನಗರದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಮತ್ತು ಜಿಲ್ಲಾ, ಕ್ಷೇತ್ರ ಟೈಲರ್ಸ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಸಂತ್ರಸ್ತರಾದ ಟೈಲರ್‍ಗಳಿಗೆ ನೆರವು ನೀಡುವ ನಮ್ಮಿಂದ ನಮ್ಮವರಿಗಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಜಿ. ಬೋಪಯ್ಯ, ಕೊಡಗಿನ ಸಂಕಷ್ಟ ಪರಿಸ್ಥಿತಿ ಊಹಿಸಲಸಾಧ್ಯ.

ಮಡಿಕೇರಿ ತಾಲೂಕಿನ 6 ಗ್ರಾ.ಪಂ.ಗಳು ಸಮಸ್ಯೆಯಲ್ಲಿದೆ. ಮುಂದಿನ ಅದಿವೇಶನ ಸಂದರ್ಭ ಜಿಲ್ಲೆಯ ಶಾಸಕರೆಲ್ಲರೂ ಒಗ್ಗೂಡಿ ಕೊಡಗಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿಶೇಷ ನೆರವು ಕೋರುತ್ತೇವೆ ಎಂದರು.

ಶಾಸಕಿ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಟೈಲರ್‍ಗಳು ಸಮಸ್ಯೆಯಲ್ಲಿ ಸಿಲುಕಿದ ಸಂದರ್ಭ ರಾಜ್ಯದಾದ್ಯಂತ ಟೈಲರ್‍ಗಳು ನೆರವಿಗೆ ಬಂದಿರುವದು ರಾಜ್ಯದ ಜನರಿಗೆ ಕಾವೇರಿ ಮಾತೆಯ ತವರಿನ ಮೇಲಿನ ಪ್ರೇಮ ನಿದರ್ಶನವಾಗಿದೆ ಎಂದು ಶ್ಲಾಘಿಸಿದರು. ಕೊಡಗಿನವರು ಎಂದೂ ಕೊಟ್ಟು ಬಾಳಿದವರೇ ವಿನಾಃ ಬೇಡಿಕೆಗಳಿಗೆ ಕೈಚಾಚಿದವರಲ್ಲ. ಆದರೆ ಪ್ರಕೃತಿ ವಿಕೋಪದಿಂದಾಗಿ ಕೊಡಗಿನ ಅನೇಕ ಗ್ರಾಮಗಳ ಜನ ಬೇರೆಯವರ

ನೆರವು ನಿರೀಕ್ಷಿಸುವಂತಾಗಿರುವದು ನೋವಿನ ವಿಚಾರ ಎಂದು ವಿಷಾಧಿಸಿದರು. ಸರ್ಕಾರದ ಮೂಲಕ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ನೀಡುವದಾಗಿಯೂ ವೀಣಾ ಅಚ್ಚಯ್ಯ ಭರವಸೆ ನೀಡಿದರು.

ರಾಜ್ಯ ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎಸ್. ಆನಂದ್ ಮಾತನಾಡಿ, ಕೊಡಗಿನಲ್ಲಿ ವಿಕೋಪವಾದಾಗ ಟೈಲರ್‍ಗಳನ್ನು ದೇವರು ಬದುಕಿಸಿದ್ದಾನೆ. ಸಂಕಷ್ಟದಲ್ಲಿದ್ದ ಟೈಲರ್‍ಗಳ ಮುಂದಿನ ಜೀವನ ರೂಪಿಸಲು ರಾಜ್ಯ ಟೈಲರ್ಸ್ ಅಸೋಸಿಯೇಷನ್ ನೆರವಿನ ಹಸ್ತ ಚಾಚಿದೆ.

ಇದೇ ಸಂದರ್ಭ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಮೂಲಕ ಕೊಡಗಿನಲ್ಲಿ ಮನೆ, ಆಸ್ತಿ, ಹೊಲಿಗೆ ಯಂತ್ರ ಕಳೆದುಕೊಂಡು ಸಂತ್ರಸ್ತರಾದ 31 ಮತ್ತು ದಕ್ಷಿಣ ಕನ್ನಡ, ಮಂಗಳೂರಿನ 6 ಟೈಲರ್‍ಗಳೂ ಸೇರಿದಂತೆ 37 ಮಂದಿಗೆ 8 ಲಕ್ಷ ರೂ.ಗಳನ್ನು ಹಂಚಿಕೆ ಮಾಡಿ ಚೆಕ್‍ಗಳನ್ನು ಶಾಸಕ ಕೆ.ಜಿ. ಬೋಪಯ್ಯ ಹಾಗೂ ವೀಣಾ ಅಚ್ಚಯ್ಯ ವಿತರಿಸಿದರು.

ಇದೇ ಸಂದರ್ಭ ಮಹಾತ್ಮಗಾಂಧೀಜಿ ಭಾವಚಿತ್ರಕ್ಕೆ ಗಣ್ಯರು ಪುಪ್ಪಾರ್ಚನೆ ಸಲ್ಲಿಸಿದರು. ಬಿ.ಎಸ್. ಆನಂದ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ವಸಂತ್ ಕುಲಾಲ್, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ವಸಂತ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ನಂದೀಶ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧÀ್ಯಕ್ಷ ಪ್ರಜ್ವಲ್ ಕುಮಾರ್, ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಸೇರಿದಂತೆ ಟೈಲರ್ಸ್ ಅಸೋಸಿಯೇಷನ್ ಪ್ರಮುಖರು ಪಾಲ್ಗೊಂಡಿದ್ದರು.