ಕುಶಾಲನಗರ, ಅ. 3: ಶೈಕ್ಷಣಿಕ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಸಾರಿಗೆ ಸೌಲಭ್ಯ ಕಲ್ಪಿಸಿಕೊಡುವದು ಅತ್ಯವಶ್ಯಕ ಎಂದು ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಬಾರ ನಿರ್ದೇಶಕಿ ಪ್ರೊ. ಮಂಜುಳಾ ಶಾಂತರಾಮ್ ತಿಳಿಸಿದರು.
ಕುಶಾಲನಗರ ಪಟ್ಟಣದಿಂದ ಹೋಬಳಿಯ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದವರೆಗೆ ನೂತನವಾಗಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ನಿಟ್ಟಿನಲ್ಲಿ ಎಸ್ಜಿಆರ್ಎಂಎಸ್ ಶ್ರೀ ಗುರು ರಾಘವೇಂದ್ರ ಟ್ರಾವೆಲ್ಸ್ನ ಮಾಲೀಕ ಶೇಷಗಿರಿ ಪ್ರಭು ಅವರು ಸಂಸ್ಥೆಯ ಮನವಿಯನ್ನು ಒಪ್ಪಿ ಬೆಳಿಗ್ಗೆ 9.30ಕ್ಕೆ ಕುಶಾಲನಗರ ಪಟ್ಟಣದಿಂದ ಕೂಡಿಗೆ-ಹೆಬ್ಬಾಲೆ ಮಾರ್ಗವಾಗಿ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದವರೆಗೆ ಹಾಗೂ ಸಂಜೆ 5 ಕ್ಕೆ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಿಂದ ಹೆಬ್ಬಾಲೆ-ಕೂಡಿಗೆ ಮಾರ್ಗವಾಗಿ ಕುಶಾಲನಗರ ಪಟ್ಟಣದವರೆಗೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಎಲ್ಲರಿಗೆ ಅನುಕೂಲವಾಗಲಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.
ಎಸ್ಜಿಆರ್ಎಂಎಸ್ ಮಾಲೀಕ ಶೇಷಗಿರಿ ಪ್ರಭು ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಸುಲಭವಾಗಿ ಉನ್ನತ ಶಿಕ್ಷಣ ಒದಗಿಸಿಕೊಡುವ ಕೆಲಸವನ್ನು ಮಂಗಳೂರು ವಿಶ್ವವಿದ್ಯಾನಿಲಯ ಮಾಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.