ಶ್ರೀಮಂಗಲ, ಅ. 3: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ದೇವಣಗೇರಿಯ ಬಿ.ಸಿ. ಹೈಸ್ಕೂಲ್ನ ಜಂಟಿ ಆಶ್ರಯದಲ್ಲಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ 155ನೇ ಹೆಜ್ಜೆಯ ಪುಸ್ತಕವಾಗಿ ಲೇಖಕಿ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ ಬರೆದ ‘ಸುಖ ಸಂಸಾರ’ ಹಾಗೂ ಯೋಜನೆಯ 156ನೇ ಹೆಜ್ಜೆಯ ಪುಸ್ತಕವಾಗಿ ಲೇಖಕ ಚೆಂಬಾಂಡ ಶಿವಿ ಭೀಮಯ್ಯ ಬರೆದ ‘ಕಂಡದ್ ಕೇಟದ್” ಎಂಬ ಎರಡು ನೂತನ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಒಬ್ಬ ವ್ಯಕ್ತಿಯ ಹೆಸರು ಅಜರಾಮರವಾಗ ಬೇಕಾದರೆ ಸಾಹಿತ್ಯ ಕೃಷಿ ಮಾಡಬೇಕು. ಕೊಡವ ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಹಾಗೂ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಪುಸ್ತಕಗಳನ್ನು ಪ್ರಕಟಿಸಲು ಯೋಜನೆ ರೂಪಿಸುವದಾಗಿ ಹೇಳಿದರು. ಕೂಟ ಇದುವರೆಗೆ ಮಾಡಿದ ಕಾರ್ಯ ಚಟುವಟಿಕೆಗಳು ಹಾಗೂ ಮುಂದಿನ ಗುರಿಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿ.ಪಂ ಸದಸ್ಯ, ದೇವಣಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ, ಎಲ್ಲರಲ್ಲಿಯೂ ಒಂದಲ್ಲ ಒಂದು ರೀತಿಯ ಕಲೆ ಇರುತ್ತದೆ. ಅದರ ಪ್ರದರ್ಶನಕ್ಕೆ ವೇದಿಕೆ ಯಾಗುವದರೊಂದಿಗೆ ಅತಿ ಹೆಚ್ಚು ಪುಸ್ತಕ ಬಿಡುಗಡೆಗೊಳಿಸಿದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಾಧನೆ ಶ್ಲಾಘನೀಯ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು. ದೂರದರ್ಶನ ಹಾಗೂ ಮೊಬೈಲಿನ ಅತಿಯಾದ ಬಳಕೆಯಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿರುವದು ವಿಷಾದನೀಯ. ಪೋಷಕರು ತಮ್ಮ ಮಕ್ಕಳಿಗೆ ಕೊಡವ ಭಾಷೆ ಕಲೆ, ಸಂಸ್ಕøತಿ ಹಬ್ಬ ಹರಿದಿನಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಮತ್ತೋರ್ವ ಅತಿಥಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಬೀನಂಡ ಪೂಣಚ್ಚ ಮಾತನಾಡಿ, ಎಲ್ಲರೂ ಓದುವ ಹವ್ಯಾಸ ರೂಢಿಸಿ ಕೊಳ್ಳುವದರೊಂದಿಗೆ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಬೇಕು. ಕೊಡವ ಭಾಷೆ ಬೆಳೆಯಬೇಕಾದರೆ ಎಲ್ಲರೊಂದಿಗೂ ಕೊಡವ ಭಾಷೆಯಲ್ಲಿಯೇ ಮಾತನಾಡಬೇಕು, ಬೇರೆ ಭಾಷೆಯಲ್ಲಿ ಮಾತನಾಡು ವದರಿಂದ ಕೊಡವ ಭಾಷೆಯ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ ಎಂದರು. ಬಿ.ಸಿ. ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ಸುನಿಲ್ ನಾಣಯ್ಯ ಮಾತನಾಡಿ, ಪುಸ್ತಕ ಪ್ರಕಟಣೆಗೆ ಧನಸಹಾಯ ನೀಡುವದರಿಂದ ಬುದ್ಧಿ ಸಂಪತ್ತಾಗಿ ಪರಿವರ್ತನೆಗೊಳ್ಳುತ್ತದೆ. ಕೂಟವು 156 ಪುಸ್ತಕಗಳನ್ನು ಹೊರತಂದಿರುವದು ದೊಡ್ಡ ಸಾಧನೆ. 200ನೇ ಹೆಜ್ಜೆಯ ಪುಸ್ತಕದಲ್ಲಿ ಕೊಡವ ಪದ್ಧತಿ, ಸಂಸ್ಕøತಿ, ಆಚಾರ-ವಿಚಾರಗಳ ಬಗ್ಗೆ ಪ್ರಕಟಿಸು ವದಾದರೆ ಅದಕ್ಕೆ ಪ್ರಾಯೋಜಕತ್ವ ನೀಡುವದಾಗಿ ಭರವಸೆ ನೀಡಿದರು.
ಹೈಸ್ಕೂಲ್ ಖಜಾಂಚಿ ಅಲ್ಲಪಂಡ ದಾದ ಉತ್ತಪ್ಪ, ಲೇಖಕ ಚೆಂಬಾಂಡ ಶಿವಿ ಭೀಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಲೇಖಕಿ ಕೊಟ್ಟಂಗಡ ಅಮ್ಮಕ್ಕಿ ಪೂವಯ್ಯ ಹೈಸ್ಕೂಲಿನ ಕರೆಸ್ಪಾಂಡೆಂಟ್ ಕರ್ನಂಡ ಬೊಳ್ಳಮ್ಮ, ನಿರ್ದೇಶಕ ಮೂಕೋಂಡ ಸಾಬು ನಾಣಯ್ಯ, ಆಡಳಿತಾಧಿಕಾರಿ ಲಕ್ಷ್ಮಿ ನಾರಾಯಣ, ಮುಖ್ಯ ಶಿಕ್ಷಕ ಲೋಕೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಕೊಡವ ಭಾಷೆಯಲ್ಲಿ ಹಾಡುಗಾರಿಕೆ, ಓದುವದು ಹಾಗೂ ಆಶುಭಾಷಣ ಸ್ಪರ್ಧೆಯನ್ನು ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕವೆಂಬ ಪ್ರತ್ಯೇಕ ವಿಭಾಗದಲ್ಲಿ ನಡೆಸಿ ವಿಭಾಗವಾರು ಪ್ರಥಮ, ದ್ವಿತೀಯ, ತೃತಿಯ ಬಹುಮಾನ ನೀಡಲಾಯಿತು. ಬಿ.ಸಿ. ಹೈಸ್ಕೂಲ್ ಹಾಗೂ ದೇವಣಗೇರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕೊಡವ ನೃತ್ಯ ಪ್ರದರ್ಶನಗೊಂಡಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿ ಬಲ್ಲಚಂಡ ಸುನಿತ ಸ್ವಾಗತಿಸಿ, ಕೂಟದ ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ಲೇಖಕರ ಪರಿಚಯ ಮಾಡಿದರು. ಕೂಟದ ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ದಾನಿಗಳ ಪರಿಚಯ ಮಾಡಿದರು. ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು.