ಮಡಿಕೇರಿ, ಅ. 3: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘ ಸ್ಫೋಟ - ಜಲಸ್ಫೋಟ ದಂತಹ ಭಾರೀ ದುರಂತಕ್ಕೆ ಬೆಂಗಳೂರು ಮಹಾನಗರಿ ಮಿಡಿದಿದೆ. ಬೆಂಗಳೂರಿನಲ್ಲಿರುವ ಕೊಡವ ಪ್ರಾತಿನಿಧಿಕ ಸಂಸ್ಥೆಯಾಗಿರುವ ಬೆಂಗಳೂರು ಕೊಡವ ಸಮಾಜದ ಮೂಲಕ ಅಲ್ಲಿ ನೆಲಸಿರುವ ಕೊಡವರು, ಕೊಡಗಿನ ಮೂಲದವರು ಹಾಗೂ ಜಿಲ್ಲೆಯ ಜನತೆಯ ಬಗ್ಗೆ ಪ್ರೀತಿಯ ಭಾವನೆ ಹೊಂದಿರುವ ಮಂದಿ ಹೆಚ್ಚು ಪ್ರಚಾರವಿಲ್ಲದೆ ನೆರವಿನ ಹಸ್ತ ನೀಡಿದ್ದಾರೆ.bಈ ಸಹೃದಯದ ಮಂದಿ ನೀಡಿರುವ ಸಹಾಯವನ್ನು ಬೆಂಗಳೂರು ಕೊಡವ ಸಮಾಜವೂ ವ್ಯವಸ್ಥಿತ ರೀತಿಯಲ್ಲಿ ಸಹಾಯ ಹಸ್ತ ನೀಡಿದ ಜನತೆಯ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ನೊಂದವರಿಗೆ ತಲಪಿಸಲು, ಸಂತ್ರಸ್ತರಾಗಿರುವವರ ಬದುಕನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ಚಿಂತನೆ, ಕಾರ್ಯಯೋಜನೆಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಯಾವದೇ ಲೋಪ - ದೋಷಗಳು ಉಂಟಾಗದಂತೆ, ದೊರೆತಿರುವ ನೆರವಿನ ಹಸ್ತ ಹಳಿತಪ್ಪದಂತೆ ದುರ್ಬಳಕೆಗೆ ಅವಕಾಶವಿಲ್ಲದ ರೀತಿಯಲ್ಲಿ ಬೆಂಗಳೂರು ಕೊಡವ ಸಮಾಜದ ಆಡಳಿತ ಮಂಡಳಿಯ ವರು, ಇವರೊಂದಿಗೆ ಅದರಲ್ಲೂ ಪ್ರಮುಖವಾಗಿ ಯುವಪಡೆ ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ಈಗಲೂ ಕಾರ್ಯತತ್ಪರವಾಗಿದೆ. ಇದರ ಪ್ರಯತ್ನದಲ್ಲಿ ಸಮಸ್ಯೆಗಳು ಉಂಟಾಗದಂತೆ ಎಚ್ಚರವನ್ನು ವಹಿಸಲಾಗಿದ್ದು, ಜಿಲ್ಲಾಡಳಿತ ವನ್ನಾಗಲಿ, ಜನಪ್ರತಿನಿಧಿಗಳನ್ನಾಗಲಿ, ಸರಕಾರದ (ಮೊದಲ ಪುಟದಿಂದ) ವ್ಯವಸ್ಥೆಯನ್ನಾಗಲಿ ಅವಲಂಬಿಸದೆ ಈ ನೆರವಿನ ಹಸ್ತ ನೀಡಲಾಗುತ್ತಿರುವದು ವಿಶೇಷವಾಗಿದೆ.
ದಿಢೀರನೆ ಎದುರಾದ ಪರಿಸ್ಥಿತಿಯಿಂದಾಗಿ ಆರಂಭದ ಒಂದೆರಡು ದಿನಗಳು ಕೆಲವಾರು ಸಮಸ್ಯೆಗಳು ಉಂಟಾಗಿ ಹೆಚ್ಚು ನಿಯಂತ್ರಣವಾಗಲಿಲ್ಲ. ಆದರೆ ನಂತರ ಎಲ್ಲವನ್ನೂ ಸರಿಪಡಿಸಲಾಗಿದೆ ಎಂಬ ಅನುಭವದೊಂದಿಗೆ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾಜಲಜಕುಮಾರ್ ಅವರುಗಳು ಈ ಕುರಿತು ‘ಶಕ್ತಿ’ ಮಾಹಿತಿ ಬಯಸಿದ ಸಂದರ್ಭ ವಿವರವಿತ್ತಿದ್ದಾರೆ.
ಸಂದೇಶ ರವಾನೆ
ದುರಂತ ನಡೆದ ಬಗ್ಗೆ ಸಮಾಜದ ಸದಸ್ಯರಿಗೆ ಹಾಗೂ ಪ್ರತ್ಯೇಕವಾಗಿ ಅವರವರ ಸ್ನೇಹಿತರುಗಳಿಗೆ ಆರಂಭದಲ್ಲಿ ವ್ಯಾಟ್ಸಾಪ್ನಂತಹ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಲಾಯಿತು. ಇದಕ್ಕೆ ತಕ್ಷಣದಿಂದಲೇ ಸ್ಪಂದನ ಸಿಗಲಾರಂಭಿಸಿತು. ಅದರಲ್ಲೂ ಕೊಡವರು ಮಾತ್ರವಲ್ಲದೆ ಇತರರೂ ಸುಮಾರು 300 ರಿಂದ 400 ಸಂಖ್ಯೆಯಲ್ಲಿ ಸಮಾಜಕ್ಕೆ ಓಡೋಡಿ ಬಂದರು. ಕೇವಲ ಎರಡು ವರ್ಷದ ಮಗುವನ್ನು ಬೇರೆಡೆ ಬಿಟ್ಟು ಧಾವಿಸಿದ ಯುವತಿಯೂ ಇದ್ದಳು. ಕೊಡವರು ಸೇರಿದಂತೆ ಎಲ್ಲ ಜಾತಿ ಜನಾಂಗದವರಿಂದ, ವಿವಿಧ ಶಾಲಾ - ಕಾಲೇಜುಗಳಿಂದ, ಸಂಘ - ಸಂಸ್ಥೆಗಳಿಂದ, ವಿವಿಧ ಕಂಪೆನಿ, ಕಾರ್ಖಾನೆಗಳಿಂದ ಸಾಮಗ್ರಿಗಳು ಬರಲಾರಂಭಿಸಿದವು. ಅವರು ಇವರು ಎನ್ನದೆ, ಹಗಲು - ರಾತ್ರಿ ಎಂಬ ಲೆಕ್ಕಾಚಾರವಿಲ್ಲದೆ ಎಲ್ಲರೂ ಶ್ರಮಿಸಿದರು. ಸಾಮಗ್ರಿಗಳು ಅಧಿಕವಾದಾಗ ಸನಿಹದ ಮೂಂಟ್ ಕಾರ್ಮಲ್ ಕಾಲೇಜು ಮೈದಾನವನ್ನು ಬಳಸಿಕೊಳ್ಳಲಾಯಿತು. ಅಲ್ಲಿ ಅಗತ್ಯ ವಸ್ತುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಂಗಡಿಸಿ ಕೊಡಗಿನತ್ತ ರವಾನಿಸ ಲಾಯಿತು. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಈ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ರವಿ ಉತ್ತಪ್ಪ ಹಾಗೂ ಮೀರಾ ಜಲಜ ಕುಮಾರ್ ಸ್ಮರಿಸಿದರು.
ಈ ನಡುವೆ ನೈಜ ಸಂತ್ರಸ್ತರಿಗೆ ಅಗತ್ಯತೆಗಳು ತಲಪುತ್ತಿಲ್ಲ. ದುರ್ಬಳಕೆಯಾಗುತ್ತಿವೆ ಎಂಬ ಮಾಹಿತಿಗಳೂ ಹೊರಬೀಳ ತೊಡಗಿತು. ಈ ನಿಟ್ಟಿನಲ್ಲಿ ಬಂದ ಸಾಮಗ್ರಿಗಳನ್ನು ವಿತರಿಸಿದ ಸಾಮಗ್ರಿಗಳು, ಫಲಾನುಭವಿಗಳ ಪಟ್ಟಿಯನ್ನು ದಾಖಲಿಸುವ ಪ್ರಯತ್ನ ನಡೆಸಲಾಯಿತು. ಬಹುತೇಕ ಎಲ್ಲವೂ ದಾಖಲೆಗಳಲ್ಲಿ ಇವೆ. ಈ ನಡುವೆ ಸಮಾಜಕ್ಕೆ ಸಂಬಂಧಿಸಿದ ಯುವಕರು - ಯುವತಿಯರು ಕೊಡಗಿಗೆ ನೇರವಾಗಿ ಆಗಮಿಸಿ ಸಮೀಕ್ಷೆ ನಡೆಸಿದ್ದಾರೆ. ನೈಜ ಸಂತ್ರಸ್ತರಿಗೆ ಇದನ್ನು ಖುದ್ದಾಗಿ ತಲಪಿಸುವ ಪ್ರಯತ್ನ ನಡೆಸಿದ್ದಾರೆ. ಇದರಲ್ಲಿ ಯಾವದೇ ಜಾತಿ ಲೆಕ್ಕಾಚಾರವನ್ನು ಮಾಡಿಲ್ಲ ಎಂಬದಾಗಿ ಅವರು ತಿಳಿಸಿದರು.
ಮನೆ, ಶಿಕ್ಷಣ, ತೋಟ - ಮನೆ ಕಳೆದುಕೊಂಡವರು, ಈ ರೀತಿಯಾಗಿ ಹಲವು ರೀತಿಯ ಸಂತ್ರಸ್ತರಿದ್ದಾರೆ. ಇವರೆಲ್ಲರಿಗೆ ಪುನರ್ ವ್ಯವಸ್ಥೆಯ ಅಗತ್ಯತೆಯನ್ನು ಮನಗಾಣಲಾಗಿದೆ. ಇದೀಗ ಎಲ್ಲಕ್ಕಿಂತ ಮಿಗಿಲಾಗಿ ಆರ್ಥಿಕ ನೆರವಿನ ಅಗತ್ಯ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸಮಾಜದ ಆಡಳಿತ ಮಂಡಳಿಯ ಹೊರತಾಗಿ ನಿವೃತ್ತ ಮೇಜರ್ ಜನರಲ್ ಕೊಡಂದೆರ ಅರ್ಜುನ್ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯೊಂದಿಗೆ ಬೆಂಗಳೂರಿನಲ್ಲಿರುವ ಇತರ ಕೊಡವ ಸಂಘಗಳ ಸಭೆಯನ್ನೂ ಕರೆದು ಚರ್ಚೆ ನಡೆಸಲಾಗಿದೆ ಎಂದು ಅವರುಗಳು ತಿಳಿಸಿದರು.
ಈ ತನಕ 60 ಬೃಹತ್ ಟ್ರಕ್ಗಳ ಮೂಲಕ ಸಾಮಗ್ರಿ ರವಾನಿಸಿರುವದು ಮಾತ್ರವಲ್ಲದೆ ಇತರ ರೂಪದಲ್ಲಿಯೂ ಕೊಡಗಿಗೆ ತಲಪಿಸಲಾಗಿದೆ. ಭಾರೀ ಮಳೆ - ಗಾಳಿಯ ಸಂದರ್ಭ ಸುಮಾರು 150ಕ್ಕೂ ಅಧಿಕ ಕುಟುಂಬಗಳು ಕೊಡಗನ್ನು ಬಿಟ್ಟು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗಳಿಗೆ ಧಾವಿಸಿ ಬಂದಿದ್ದರು. ಈ ರೀತಿಯಾಗಿ ಬಂದವರಿಗೂ ಸಮಾಜದ ಮೂಲಕ ಖರ್ಚು - ವೆಚ್ಚದ ಸಹಿತವಾಗಿ ನೆರವು ನೀಡಲಾಗಿದೆ ಎಂದು ಅವರುಗಳು ಉಲ್ಲೇಖಿಸಿದರು.
ಅರ್ಜಿ ಸ್ವೀಕಾರ
ಪ್ರಸ್ತುತ ಅಗತ್ಯತೆ ಇರುವದರಿಂದ ಅರ್ಜಿಯನ್ನು ಪಡೆದುಕೊಳ್ಳ ಲಾಗುತ್ತಿದೆ. ಸಮಾಜದ ಮೂಲಕ ರಚಿಸಿರುವ ಸಮಿತಿಯ ಮೂಲಕ ಸಭೆಯನ್ನೂ ನಡೆಸಲಾಗುತ್ತಿದ್ದು, ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಯಾರ ಕಾಳಜಿಯೂ ದುರುಪ ಯೋಗವಾಗಬಾರದು. ಈಗಲೂ ಕೆಲವಾರು ಯುವಕರು ಜಿಲ್ಲೆಯಲ್ಲಿ ಕಾರ್ಯನಿರತರಾಗಿದ್ದಾರೆ. ಇದ ರೊಂದಿಗೆ ಮುಂದಿನ ವಾರದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ಜಿಲ್ಲೆಗೆ ಕಳುಹಿಸಲಾಗುತ್ತಿದೆ. ಆರ್ಥಿಕ ಕ್ರೋಢೀಕರಣದ ಪ್ರಯತ್ನವನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿದೆ. ಕೆಲವು ಪ್ರತಿಷ್ಠಿತ ಕಂಪೆನಿಗಳು ಸಹಾಯ ನೀಡಲು ಮುಂದಾಗಿದ್ದರೂ ಅವರಿಗೆ ತೆರಿಗೆ ವಿನಾಯಿತಿ ಇಲ್ಲದಿರುವದು ಸಮಸ್ಯೆಯಾಗಿದ್ದು, ಈ ನಿಟ್ಟಿನಲ್ಲಿಯೂ ವ್ಯವಹರಿಸಲಾಗುತ್ತಿದೆ ಎಂದು ತಿಳಿಸಿದ ಅವರುಗಳು ಕೊಡಗಿನ ಜನರ ಮೇಲೆ ತೋರಿರುವ ಎಲ್ಲರ ಪ್ರೀತಿಗೆ ಸಮಾಜ ಅಬಾರಿಯಾಗಿದೆ ಎಂದು ಹೇಳಿದರು. ನೈಜವಾಗಿ ಸಂತ್ರಸ್ತರಾಗಿರುವರಿಗೆ ಅಗತ್ಯತೆಗೆ ತಕ್ಕಂತೆ ಸಹಾಯಹಸ್ತ ನೀಡುವ ಚಿಂತನೆ ಸಮಾಜದ್ದಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿ ಯುತ್ತಿರುವದಾಗಿ ರವಿ ಉತ್ತಪ್ಪ ಹಾಗೂ ಮೀರಾಜಲಜಕುಮಾರ್ ಅವರು ತಿಳಿಸಿದರು. -ಶಶಿ ಸೋಮಯ್ಯ