ಮಡಿಕೇರಿ, ಅ. 3: ಮಳೆಗಾಲದ ಆರು ತಿಂಗಳು ಕೊಡಗಿನಲ್ಲಿ ಯರವ, ಜೇನು ಕುರುಬ, ಕಾಡು ಕುರುಬ ಹಾಗೂ ಸೋಲಿಗ ಜನಾಂಗದೊಂದಿಗೆ ಪರಿಶಿಷ್ಟ ಪಂಗಡದಲ್ಲಿ ಕುಡಿಯರಿಗೂ ಪೌಷ್ಟಿಕ ಆಹಾರ ನೀಡುವಂತೆ ಸರಕಾರದ ನಿರ್ದೇಶನವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸಲಾಗುವದು ಎಂದು ತಾ.ಪಂ. ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿ ಗಮನ ಸೆಳೆಯುವದ ರೊಂದಿಗೆ, ಈ ಬಗ್ಗೆ ದುರುಪಯೋಗ ಆಗದಂತೆ ನಿಗಾವಹಿಸಲು ಸೂಚಿಸಲಾಯಿತು.

ಮಳೆಗಾಲದ ಆರು ತಿಂಗಳು ಪರಿಶಿಷ್ಟ ವರ್ಗದ ಈ ಜನರಿಗೆ ವಿಶೇಷ ಕಾಳಜಿಯೊಂದಿಗೆ 15 ಕೆ.ಜಿ. ಅಕ್ಕಿ, 5 ಕೆ.ಜಿ. ತೋಗರಿಬೆಳೆ, 1 ಕೆ.ಜಿ. ನಂದಿನಿ ತುಪ್ಪ, ಹೆಸರು, ಅಲಸಂದೆ, ಹುರುಳಿ ಸಹಿತ 5 ಕೆ.ಜಿ. ಹಾಗೂ 4 ಕೆ.ಜಿ. ಸಕ್ಕರೆ, 45 ಮೊಟ್ಟೆ ಮತ್ತು ಎಣ್ಣೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದರು. ಅಲ್ಲದೆ ಕುಡಿಯುವ ನೀರು ಯೋಜನೆಯಡಿ ಬಿಡುಗಡೆಗೊಂಡಿ ರುವ ರೂ. 2.50 ಕೋಟಿ ಅಂದಾಜು ಹಣಕ್ಕೆ ಸಮರ್ಪಕ ಮಾಹಿತಿ ಇಲ್ಲವೆಂದು ತಾ.ಪಂ. ಅಧ್ಯಕ್ಷೆ ಶೋಭಾ ಅವರೇ ಶಂಕೆ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕು ಪಂಚಾಯಿತಿಯ 2018-19 ನೇ ಸಾಲಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಯೋಜನೆಯಡಿ ಲಭ್ಯವಿರುವ ಫಲಾನುಭವಿಗಳಿಗೆ ತಲಪಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಕೆಲಸ ನಿರ್ವಹಿಸಬೇಕು ಹಾಗೂ ಇಲಾಖೆಯ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಶೋಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ತಮ್ಮ ಇಲಾಖೆಯಲ್ಲಿ ಕೈಗೊಳ್ಳಲಾದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿ ಪೋಷಣ ಮಾಸ ಅಭಿಯಾನದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಮಡಿಕೇರಿ ತಾಲೂಕಿಗೆ ಸಂಬಂಧಿಸಿದ ಅಂಗನವಾಡಿಗಳಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ‘ಮನೆಮನೆಯಲ್ಲಿ ಪೋಷಣ ಮಾಸದ ಹಬ್ಬ’ ಎಂಬ ಶೀರ್ಷಿಕೆಯಲ್ಲಿ ಮಾತೃಪೂರ್ಣ, ಮಾತೃವಂದನ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲಾಯಿತು ಎಂದರು.

ಜೊತೆಗೆ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಕಿಶೋರಿಯರಿಗೆ ಹಾಗೂ ಮಕ್ಕಳಿಗೆ ಅರಿವು ಕಾರ್ಯಕ್ರಮ, ಗರ್ಭಿಣಿ, ಬಾಣಂತಿಯರಿಗೆ, ಕಿಶೋರಿಯರಿಗೆ ಆರೋಗ್ಯ ತಪಾಸಣೆ, ಚುಚ್ಚುಮದ್ದು ಕಾರ್ಯಕ್ರಮ, ಪೌಷ್ಟಿಕತಾ ಮಟ್ಟವನ್ನು ಗುರುತಿಸಿ ಅರಿವು ಮೂಡಿಸುವದು ಹಾಗೂ ಅನ್ನಪ್ರಾಸನ, ಮಕ್ಕಳನ್ನು ಕೇಂದ್ರಕ್ಕೆ ನೊಂದಣಿ ಮಾಡಿಕೊಳ್ಳುವ ಆಂದೋಲನ ನೆರೆವೇರಿತು. ಅಕ್ಟೋಬರ್ ತಿಂಗಳಿನಲ್ಲಿ ಕೂಡ ಯೋಜನೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು. ಪ್ರಕೃತಿ ವಿಕೋಪದಿಂದ ದುರಸ್ತಿಗೀಡಾದ 14 ಅಂಗನವಾಡಿ ಯನ್ನು ಪುನರ್‍ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಣ್ಣಪ್ರಮಾಣದಲ್ಲಿ ಹಾನಿಗೀಡಾದ ಅಂಗನವಾಡಿ ಕೇಂದ್ರದಲ್ಲಿ ಟೈಲ್ಸ್, ಶೌಚಾಲಯವನ್ನು ದುರಸ್ತಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳಿಗೆ ದೈನಂದಿನ ಪಟ್ಟಿಯಂತೆ ಆಹಾರ ನೀಡುವಂತೆ ಅಧ್ಯಕ್ಷೆ ಶೋಭಾ ಅಧಿಕಾರಿಗೆ ಸೂಚನೆ ನೀಡಿದರು. ಕೆಲವೆಡೆ ಮಕ್ಕಳಿಗೆ ಅನ್ನ, ಸೊಪ್ಪು ಸಾರು ಮಾತ್ರ ನೀಡುತ್ತಿರುವ ಆರೋಪವಿದೆ ಎಂದರು.

ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, 13 ಶಾಲೆಗೆ ಮಳೆಹಾನಿ ಪರಿಹಾರನಿಧಿಯಡಿಯಲ್ಲಿ ಅನುದಾನ ಲಭ್ಯವಾಗಿದೆ ಎಂದರು. ಇಲಾಖೆಗಳು ಸರಕಾರದ ಗುರಿ ಸಾಧನೆಯಲ್ಲಿ ಸಮರ್ಪಕ ಕೆಲಸ ನಿರ್ವಹಿಸಬೇಕೆಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಸೂಚಿಸಿದರು.

ಕಾರುಗುಂದ ಶಾಲೆಯಲ್ಲಿ ಶಿಕ್ಷಕರೊಬ್ಬರು ವಿನಾಃ ಕಾರಣ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕಿಯರಿಗೆ ತೊಂದರೆ ನೀಡುತ್ತಿದ್ದಾರೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಶಿಕ್ಷಕಿಯ ಈ ರೀತಿಯ ನಡವಳಿಗೆ ಕಾರಣವೇನು ಎಂದು ಅಧ್ಯಕ್ಷೆ ಶಿಕ್ಷಣಾಧಿಕಾರಿಯನ್ನು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವದಾಗಿ ಗಾಯತ್ರಿ ಸಭೆಯ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಅಧ್ಯಕ್ಷೆ ಈ ಬಗ್ಗೆ ಶೀಘ್ರದಲ್ಲಿಯೇ ಪರಿಶೀಲನೆ ನಡೆಸಿ, ಶಿಕ್ಷಕಿಯದ್ದು ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಿ ಎಂದು ಸೂಚಿಸಿದರು.

ತೋಟಗಾರಿಕೆಯ ಇಲಾಖೆಯಿಂದ ರೈತರಿಗೆ ತೆಂಗಿನ ಗಿಡ ವಿತರಿಸುವ ಬದಲು, ಲಾಭದಾಯಕವಾಗಿರುವ ರಾಂಬೂಟನ್, ಸಫೋಟ ಗಿಡಗಳನ್ನು ವಿತರಣೆ ಮಾಡಬೇಕು. ಇಲಾಖೆಯಿಂದ ಒರ್ವ ರೈತನಿಗೆ 20 ತೆಂಗಿನಗಿಡ ವಿತರಿಸಿದರೆ ಅದನ್ನು ಬೆಳೆಯಲು ಎಲ್ಲಾ ರೈತರಿಗೆ ಅಷ್ಟು ಜಾಗವಿಲ್ಲ. ಈ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಕೊಡಪಾಲು ಗಣಪತಿ ಸೂಚಿಸಿದರು.

ತೋಟಗಾರಿಕಾ ಇಲಾಖೆಯ ಪ್ರಕೃತಿ ವಿಕೋಪಕ್ಕೆ ಒಳಗಾದ ಗ್ರಾಮಗಳಲ್ಲಿ ತೋಟದ ಸರ್ವೇ ಕಾರ್ಯ ಮಾಡಲಾಗಿದೆ. 99 ಹಳ್ಳಿಗಳಲ್ಲಿಯೂ ಕೂಡ ಶೇಕಡ 50 ಕ್ಕೂ ಅಧಿಕ ಫಸಲು ನಾಶವಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ರೈತರಿಗೆ ಎನ್‍ಡಿಆರ್‍ಎಫ್ ಗೈಡ್‍ಲೈನ್ ಪ್ರಕಾರ ಕಂದಾಯ ಇಲಾಖೆ ಅನುದಾನ ನೀಡಲಿದೆ ಎಂದು ತಿಳಿಸಿದರು. ಪೌಷ್ಟಿಕ ಆಹಾರ ವಿತರಣೆಯಲ್ಲಿ ಕುಡಿಯ ಸಮುದಾಯವನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಪ್ರಸ್ತಕ ತಿಂಗಳಿನಿಂದ ಈ ಜನಾಂಗದವರಿಗೂ ಈ ವ್ಯವಸ್ಥೆಯನ್ನು ತಲಪಿಸಲು ಕ್ರಮ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆ-ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳಿಗೆ 25 ಲಕ್ಷ ರೂ, ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 8 ಲಕ್ಷ ರೂ ಬಿಡುಗಡೆಯಾಗಿದ್ದು, ಫಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವದು ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾಹಿತಿ ನೀಡಿದರು.

ಪ್ರಕೃತಿ ವಿಕೋಪದ ಸಂದÀರ್ಭ ಇದುವರೆಗೂ ಮೃತಪಟ್ಟ 59 ಜಾನುವಾರಿಗೆ ಚೆಕ್ ವಿತರಣೆ ಆಗಿದೆ. ಮೃತ ಪಟ್ಟ ಹಸುವಿಗೆ 30 ಸಾವಿರ, ಎತ್ತುವಿಗೆ 25 ಹಾಗೂ ಹಂದಿ ಆಡುಗಳಿಗೆ ತಲಾ 3 ಸಾವಿರ ರೂ ವಿತರಿಸಲಾಗಿದೆ ಎಂದು ಪಶು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಮೀನುಗಾರಿಕೆ, ಆರೋಗ್ಯ, ಆಯುಷ್, ಸಹಕಾರ ಸೇರಿದಂತೆ ನಾನಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ, ನಾನಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.