ಮಡಿಕೇರಿ, ಅ. 2: ಗಾಂಧಿ ಜಯಂತಿ ಪ್ರಯುಕ್ತ ಕೊಡಗು ಪೊಲೀಸ್ ಹಾಗೂ ಗ್ರೀನ್ ಸಿಟಿ ಫೋರಂ ಸಂಘಟನೆ ಆಶ್ರಯದಲ್ಲಿ ಮಂಗಳವಾರ ಮಡಿಕೇರಿ ಗ್ರಾಮಾಂತರ ಠಾಣೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿತು.

ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನ ಅಂಗವಾಗಿ ಗ್ರೀನ್ ಸಿಟಿ ಫೋರಂ ಹಮ್ಮಿಕೊಂಡಿದ್ದ ಮಡಿಕೇರಿ ಕೋಟೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೊಡಗು ಪೊಲೀಸರು ಪಾಲ್ಗೊಂಡಿದ್ದರು. ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್, ಅಭಿಯಾನ ದಿಂದ ಸ್ಫೂರ್ತಿಗೊಂಡು ಗಾಂಧಿ ಜಯಂತಿ ದಿನ ಜಿಲ್ಲೆಯ ಎಲ್ಲಾ ಠಾಣೆ ಮತ್ತು ವಸತಿ ನಿಲಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಗೊಳಿಸುವಂತೆ ಆದೇಶಿಸಿದರು.

ಎಸ್ಪಿ ಸೂಚನೆಯನ್ವಯ ಮಡಿಕೇರಿ ಡಿವೈಎಸ್ಪಿ ಕೆ.ಎಸ್. ಸುಂದರ್‍ರಾಜ್ ಮುತುವರ್ಜಿಯಿಂದ ಗ್ರಾಮಾಂತರ ಠಾಣೆ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಗೊಳಿಸಲಾಯಿತು. ಠಾಣೆ ಹಿಂಭಾಗದಲ್ಲಿ ಬೆಳೆದಿದ್ದ ಕಾಡು ಕಡಿಯಲಾಯಿತು. ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ತ್ಯಾಜ್ಯ ವಸ್ತು ತೆರವುಗೊಳಿಸಲಾಯಿತು. ಗ್ರೀನ್ ಸಿಟಿ ಫೋರಂ ನಿರ್ದೇಶಕ ಮಾದೇಟಿರ ತಿಮ್ಮಯ್ಯ ತಮ್ಮ ತೋಟದಲ್ಲಿ ಕೆಲಸ ಮಾಡುವ ಯಂತ್ರ ಸಹಿತ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದು, ಠಾಣೆ ಆವರಣದಲ್ಲಿ ಬೆಳೆದಿದ್ದ ಹುಲ್ಲು ಕತ್ತರಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಇರುವ ಪೊಲೀಸ್ ಕವಾಯತು ಮೈದಾನ ವ್ಯಾಪ್ತಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ತದನಂತರ ಗ್ರಾಮಾಂತರ ಠಾಣೆ ಆವರಣಕ್ಕೆ ಆಗಮಿಸಿದ ಎಸ್ಪಿ, ಗ್ರೀನ್ ಸಿಟಿ ಫೋರಂ ಸ್ವಚ್ಛತಾ ಕಾರ್ಯದಿಂದ ಸ್ಫೂರ್ತಿಗೊಂಡು ಇಂದಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೊಲೀಸ್ ಠಾಣೆ, ವಸತಿ ನಿಲಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಲು ಗಮನ ಹರಿಸಲಾಗುವದೆಂದರು.

ಶ್ರಮದಾನದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಐ.ಪಿ. ಮೇದಪ್ಪ, ಮಹಿಳಾ ಠಾಣೆ ಸಬ್ ಇನ್ಸ್‍ಪೆಕ್ಟರ್ ಅಚ್ಚಮ್ಮ, ಮಡಿಕೇರಿ ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಚೇತನ್, ಸಂಚಾರಿ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮಹಾದೇವ್, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಮೂರ್ತಿ, ನಿರ್ದೇಶಕರಾದ ಮೋಂತಿ ಗಣೇಶ್, ಪೂಳಕಂಡ್ರ ರಾಜೇಶ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಾದೇಟಿರ ತಿಮ್ಮಯ್ಯ, ಕಿರಿಯಮಾಡ ರತನ್ ತಿಮ್ಮಯ್ಯ, ನಿವೃತ್ತ ಯೋಧ ತಂಬುಕುತ್ತಿರ ಗಪ್ಪು ಸೋಮಯ್ಯ ಪಾಲ್ಗೊಂಡಿದ್ದರು.