ಮಡಿಕೇರಿ, ಅ. 1: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಗ್ರಾ.ಪಂ. ಸದಸ್ಯನೋರ್ವ ಗುಂಡಿಕ್ಕಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರಗೋಡಿನಲ್ಲಿ ನಡೆದಿದೆ.ಮರಗೋಡು ಗ್ರಾ.ಪಂ. ಸದಸ್ಯ ಮುಂಡೋಡಿ ನಾಣಯ್ಯ ಆಲಿಯಾಸ್ ನಂದಾ ಹತ್ಯೆ ಮಾಡಿದ ಆರೋಪಿಯಾಗಿದ್ದು, ಅಲ್ಲಿನ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಕಾನಡ್ಕ ತಿಲಕ್‍ರಾಜ್ (38) ಹತ್ಯೆಗೀಡಾದ ದುರ್ದೈವಿ. ಮೃತ ತಿಲಕ್ ರಾಜ್ ಕಳೆದ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಆರೋಪಿ ನಂದಾ ವಿರುದ್ಧ ಸ್ಪರ್ಧಿಸಿ 4 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ವಿಧಾನ ಸಭಾ ಚುನಾವಣೆ ಸಂದರ್ಭ ಜೆಡಿಎಸ್ ಪರವಾಗಿ ಕೆಲಸ ಮಾಡುತ್ತಿದ್ದ ನಂದಾ ಹಾಗೂ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದ ತಿಲಕ್‍ರಾಜ್ ನಡುವೆ ರಾಜಕೀಯ ವಿಚಾರವಾಗಿ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದಿತ್ತು. ಈ ಸಂದರ್ಭ ಸ್ಥಳೀಯರು ಸಮಾಧಾನಪಡಿಸಿದ್ದರು. ಹೀಗಿದ್ದರೂ ಇಬ್ಬರ ನಡುವೆ ರಾಜಕೀಯ ದ್ವೇಷ ಬೂದಿಮುಚ್ಚಿದ್ದ ಕೆಂಡದಂತಿತ್ತು. ಈ ನಡುವೆ ಇಂದು ಸಂಜೆ 6.30 ಸಮಯದಲ್ಲಿ ಮರಗೋಡು ವಿಜಯ ಬ್ಯಾಂಕ್
(ಮೊದಲ ಪುಟದಿಂದ) ಎದುರು ನಂದಾ ಹಾಗೂ ಚಿದಂಬರ ಎಂಬವರುಗಳು ಮಾತುಕತೆಯಲ್ಲಿ ತೊಡಗಿದ್ದ ವೇಳೆ ಅಲ್ಲಿಗೆ ತಿಲಕ್‍ರಾಜ್ ಆಗಮಿಸಿದ್ದಾರೆ. ಈ ಸಂದರ್ಭ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮುಂಡೋಡಿ ನಂದಾ ಹಾಗೂ ತಿಲಕ್‍ರಾಜ್ ನಡುವೆ ಮಾತಿಗೆ ಮಾತು ಬೆಳೆದು ನಂದಾ ತನ್ನ ಬಳಿ ಇದ್ದ ಪಿಸ್ತೂಲಿನಿಂದ ತಿಲಕ್‍ರಾಜ್‍ನ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ತಿಲಕ್‍ರಾಜ್‍ನನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಯಿತಾದರೂ, ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಾರೆ. ತಿಲಕ್‍ರಾಜ್ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕೆಜಿಬಿ ಭೇಟಿ
ಘಟನೆ ಕುರಿತು ಮಾಹಿತಿ ಪಡೆದ ಶಾಸಕ ಕೆ.ಜಿ. ಬೋಪಯ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬೋಪಯ್ಯ ಆರೋಪಿ ನಂದಾ ಬಗ್ಗೆ ಮರಗೋಡು ವ್ಯಾಪ್ತಿಯಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ ಸದಾ ಮದ್ಯಪಾನ ಮಾಡುತ್ತಾ ಎಲ್ಲರನ್ನು ಬೆದರಿಸುತ್ತ್ತಾ ಕಾಲಹರಣ ಮಾಡುತ್ತಿದ್ದ. ಮೃತ ತಿಲಕ್‍ರಾಜ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಪ್ರತಿನಿತ್ಯ ಎಲ್ಲರೊಂದಿಗೆ ಹಗೆ ಸಾಧಿಸುತ್ತಿದ್ದ ನಂದಾ ಇದೀಗ ತಿಲಕ್‍ರಾಜ್ ಅವರನ್ನು ಹತ್ಯೆ ಮಾಡಿರುವದು ಖಂಡನೀಯ. ಕೂಡಲೇ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಮತ್ತಿತರರು ಇದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಡರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವದಾಗಿ ‘ಶಕ್ತಿ’ಗೆ ಬಲ್ಲಮೂಲಗಳಿಂದ ತಿಳಿದು ಬಂದಿದೆ.