ಮಡಿಕೇರಿ, ಅ. 1: ಕೊಡಗಿನ ಕುಲಮಾತೆ, ಜೀವನದಿ ಕಾವೇರಿಯು ತೀರ್ಥರೂಪಿಣಿಯಾಗಿ ಆವಿರ್ಭ ವಿಸಲಿರುವ ಸಂಬಂಧ ತಾ. 17ರ ತುಲಾ ಸಂಕ್ರಮಣ ಕಾವೇರಿ ಜಾತ್ರೆಯ ಪ್ರಯುಕ್ತ ಇಂದು ಪೂರ್ವಭಾವಿ ಸಭೆಯೊಂದಿಗೆ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.ತಾ. 17 ರಂದು ಜರುಗುವ ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿ ಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಾತ್ರಾ ಸಿದ್ಧತೆ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾ. 17 ರಂದು ಸಂಜೆ 6.43 ಗಂಟೆಗೆ ತೀರ್ಥೋದ್ಭವ ಪುಣ್ಯಕಾಲ ಜರುಗುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ ಬಸ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಮಡಿಕೇರಿಯಿಂದ ತಲಕಾವೇರಿ ವರೆಗೆ ರಸ್ತೆ ಗುಂಡಿ ಮುಚ್ಚುವದು, ರಸ್ತೆ ಬದಿ ಕಾಡು ಕಡಿಯುವದು, ಸುಣ್ಣ ಬಣ್ಣ ಬಳಿಯುವಂತೆ ಲೋಕೋಪ ಯೋಗಿ ಇಲಾಖೆ ಎಂಜಿನಿಯರಿಗೆ ಅವರು ನಿರ್ದೇಶನ ನೀಡಿದರು.

ಭಾಗಮಂಡಲದಿಂದ ತಲಕಾವೇರಿ ವರೆಗೆ ಬೀದಿ ದೀಪ ಅಳವಡಿಸುವದು, ಹಾಗೆಯೇ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಇಲಾಖೆ ಎಂಜಿನಿಯರಿಗೆ ಸೂಚನೆ ನೀಡಿದರು.

ತಲಕಾವೇರಿ ಕುಂಡಿಕೆ ಹಾಗೂ ಕೊಳದ ಬಳಿ ನೂಕುನುಗ್ಗಲು ಉಂಟಾಗದಂತೆ ಅಗತ್ಯ ಬ್ಯಾರಿಕೇಡ್‍ಗಳನ್ನು ಅಳವಡಿಸಬೇಕು. ಗಣ್ಯ ವ್ಯಕ್ತಿಗಳು, ಅತಿಥಿಗಳು, ಒಬಿ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವದು. ತುರ್ತು ಸಂದರ್ಭದಲ್ಲಿ ನಿರ್ವಹಿಸಲು ಅಗ್ನಿ ಶಾಮಕ ದಳ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಮತ್ತು ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯುವದು. ಆಂಬ್ಯುಲೆನ್ಸ್ ಕಲ್ಪಿಸುವದು, ನುರಿತ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಆ ನಿಟ್ಟಿನಲ್ಲಿ ಜಾತ್ರೆ ಸಂದರ್ಭದಲ್ಲಿಯೂ ಪ್ಲಾಸ್ಟಿಕ್‍ನ್ನು ಬಳಸಬಾರದು, ಈ ಬಗ್ಗೆ ಮಾಹಿತಿ ನೀಡಬೇಕು. ಅಗತ್ಯವಿರುವ ಕಡೆ ಕಸದ ತೊಟ್ಟಿಗಳನ್ನು ಇಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ಆಹ್ವಾನಿಸಲಾಗು ವದು ಎಂದು ಮಾಹಿತಿ ನೀಡಿದರು.

ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ತಲಕಾವೇರಿ, ಭಾಗಮಂಡಲಕ್ಕೆ ಆಗಮಿಸುವ (ಮೊದಲ ಪುಟದಿಂದ) ಭಕ್ತಾಧಿಗಳಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಕಲ್ಪಿಸುವದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾಗಮಂಡಲ ಗ್ರಾ.ಪಂ. ಪಿಡಿಓಗೆ ಸೂಚಿಸಿದರು.

ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರ ಕಾರ್ಮಿಕರನ್ನು ನಿಯೋಜಿಸಲು ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆಯುವಂತೆ ತಾ.ಪಂ. ಇಒಗೆ ಸಲಹೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆಣ್ಣೇಕರ್ ಮಾತನಾಡಿ, ತುಲಾ ಸಂಕ್ರಮಣ ಜಾತ್ರೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವದರಿಂದ ವಾಹನ ಸುಗಮ ಸಂಚಾರಕ್ಕೆ ಅಗತ್ಯ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುವದು ಎಂದು ತಿಳಿಸಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ ಅರ್ಚಕರು ಮತ್ತು ತಕ್ಕ ಮುಖ್ಯಸ್ಥರು ಕುಂಡಿಕೆ ಬಳಿ ಇರುತ್ತಾರೆ. ಉಳಿದಂತೆ ಗಣ್ಯರು, ಪತ್ರಕರ್ತರು ಒಂದು ಕಡೆ ಇರುತ್ತಾರೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದ್ದು, ತುಲಾ ಸಂಕ್ರಮಣಕ್ಕೆ ಒಂದು ತಿಂಗಳವರೆಗೆ ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.

ಜಾತ್ರೆ ಸಂದರ್ಭದಲ್ಲಿ ಶಾಮಿಯಾನ, ಧ್ವನಿವರ್ಧಕ ವ್ಯವಸ್ಥೆ, ತೀರ್ಥೋದ್ಭವ ದಿನದಂದು ಭಕ್ತಾಧಿಗಳಿಗೆ ನೇರ ವೀಕ್ಷಣೆಗೆ ಎಲ್.ಸಿ.ಡಿ. ವ್ಯವಸ್ಥೆ ಮಾಡಲಾಗುವದು ಎಂದು ಅವರು ಹೇಳಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾತನಾಡಿ ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವದು. ಭಕ್ತಾಧಿಗಳಿಗೆ ಯಾವದೇ ತೊಂದರೆಯಾಗದಂತೆ ಗಮನ ಹರಿಸಲಾಗುವದು ಎಂದು ಅವರು ಹೇಳಿದರು.

ಸಣ್ಣುವಂಡ ಕಾವೇರಪ್ಪ ಮಾತನಾಡಿ ತುಲಾ ಸಂಕ್ರಮಣ ಜಾತ್ರೆ ನಂತರ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಆಂದೋಲನ ಆಯೋಜಿಸು ವಂತಾಗಬೇಕು ಎಂದು ಸಲಹೆ ಮಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗುವದು ಎಂದು ಕೆ.ಟಿ. ದರ್ಶನ್ ಮಾಹಿತಿ ನೀಡಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಅನುಕೂಲಕ್ಕಾಗಿ ವಸ್ತುಪ್ರದರ್ಶನ ಏರ್ಪಡಿಸಲಾಗುವದು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಗಿರೀಶ್ ಮಾಹಿತಿ ನೀಡಿದರು.

ಪೊಲೀಸ್ ಇನ್ಸ್‍ಪೆಕ್ಟರ್ ಮೇದಪ್ಪ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್, ಸೆಸ್ಕ್ ಎಇಇ ದೇವಯ್ಯ, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ನಳವಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೋ, ವ್ಯವಸ್ಥಾಪನಾ ಸಮಿತಿಯ ಇಒ ಜಗದೀಶ್ ಕುಮಾರ್ ಇತರರು ಹಲವು ಮಾಹಿತಿ ನೀಡಿದರು.