ಸಿದ್ದಾಪುರ, ಅ.1: ಮಹಿಳಾ ಸಂಘಟನೆಯ ಮುಖ್ಯಸ್ಥೆಯೊಬ್ಬರ ಪತಿ ಹಾಗೂ ಪುತ್ರ ಸೇರಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಡಿಗೋಡು ಗ್ರಾಮದ ನಿವಾಸಿ ಮಹಿಳಾ ಸಂಘದ ಸೇವಾ ಪ್ರತಿನಿಧಿ ಗೀತಾ ಸತೀಶ್ ಎಂಬವರು ಭಾನುವಾರ ಸಂಜೆ ಕರಡಿಗೋಡಿನ ಚಿಕ್ಕನಳ್ಳಿ ಪೈಸಾರಿಯ ಕೆಲಸದ ನಿಮ್ಮಿತ್ತ ತೆರಳುವ ಸಂದರ್ಭ ಅಲ್ಲಿನ ನಿವಾಸಿ ಅನಿಲ್ ಎಂಬವರು ಗೀತಾ ಬಳಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಿಮ್ಮ ಸಂಘಟನೆ ಸಂತ್ರಸ್ತರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರಾಕೃತಿಕ ವಿಕೋಪದಿಂದಾಗಿ ಕರಡಿಗೋಡಿನ ನಿವಾಸಿ ಗಳಿಗೆ ಕೂಲಿ ಕೆಲಸವಿಲ್ಲದೆ ಸಂಕಷ್ಟ ದಲ್ಲಿದ್ದು, ಇಂತಹ ಸನ್ನಿವೇಶದಲ್ಲಿ ಸಂಘಟನೆಗಳು ಸಾಲ ವಸೂಲಾತಿ ಮಾಡಬಾರದೆಂದು ಒತ್ತಾಯಿಸಿದ್ದಾಗಿ ಹೇಳಲಾಗಿದೆ. ಈ ಸಂದರ್ಭದಲ್ಲಿ ಗೀತಾ ಹಾಗೂ ಅನಿಲ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಗೀತಾಳ ಪತಿ ಸತೀಶ್ ಹಾಗೂ ಪುತ್ರ ಕೀರ್ತನ್ ಸೇರಿ ರಾತ್ರಿ ಸಮಯದಲ್ಲಿ ಅನಿಲ್ ಮನೆಗೆ ನುಗ್ಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದರೆಂದು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿಲ್ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಪ್ರತಿ ದೂರು : ಗೀತಾ ಸತೀಶ್ ಚಿಕ್ಕನಳ್ಳಿ ಪೈಸಾರಿಯಲ್ಲಿ ಮಹಿಳಾ ಸಂಘಗಳ ದಾಖಲಾತಿಗಳನ್ನು ಪರಿಶೀಲಿಸಲು ತೆರಳಿದ ಸಂದರ್ಭ ಅನಿಲ್ ವಿನಾಕಾರಣ ಗೀತಾ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಗಳ ಪದಾಧಿಕಾರಿಗಳು ನೀಡಿದ ಪುಕಾರಿನ ಮೇರೆಗೆ ಅನಿಲ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.