ಮಡಿಕೇರಿ, ಸೆ. 30: ಪ್ರಾಕೃತಿಕ ವಿಕೋಪದ ನಡುವೆ ಕಳೆದ ಎರಡು ತಿಂಗಳಿನಿಂದ ಸಾರಿಗೆ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿರುವ ಗ್ರಾಮೀಣ ಜನತೆ ತಕ್ಷಣದಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹ ಪಡಿಸಿದ್ದಾರೆ. ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಗರ್ವಾಲೆ, ಶಿರಂಗಳ್ಳಿ, ಮೂವತ್ತೊಕ್ಲು ಸುತ್ತಮುತ್ತಲಿನ ಗ್ರಾಮಸ್ಥರು ಇಂದಿಗೂ ಬಸ್ ಸೌಲಭ್ಯ ಸಾಧ್ಯವಿಲ್ಲದ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿಗಳ ಸಹಿತ ಕ್ಷೇತ್ರದ ಶಾಸಕರಿಗೆ ಗ್ರಾಮೀಣ ಜನತೆಯ ತೊಂದರೆ ಬಗ್ಗೆ ಗಮನ ಸೆಳೆದು, ನಿತ್ಯ ಶಾಲಾ - ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಬವಣೆ ಪಡುತ್ತಿರುವ ಕಾರಣ, ಬಸ್ ಸೌಲಭ್ಯ ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಳೆದೆರಡು ದಿನ ಮಳೆಯಿಂದಾಗಿ ಈಗಾಗಲೇ ತಾತ್ಕಾಲಿಕವಾಗಿ ಸರಿಪಡಿಸಿರುವ ರಸ್ತೆಗಳು ಕೆಸರುಮಯ ಗೊಂಡು, ವಾಹನಗಳ ಸಂಚಾರಕ್ಕೆ ಮತ್ತೆ ಸಮಸ್ಯೆಯಾಗಿದೆ ಎಂದು ನೆನಪಿಸಿದ್ದಾರೆ. ಹೀಗಾಗಿ ಈ ಮೊದಲು ಜಿಲ್ಲಾಧಿಕಾರಿ ಗಳ ಗಮನಸೆಳೆದು ಮಿನಿ ಬಸ್ ಓಡಾಟಕ್ಕೆ ಪ್ರಯತ್ನ ನಡೆದಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಎದುರಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬದಲಾಗಿ ಮಡಿಕೇರಿಯಿಂದ ಸುಂಟಿಕೊಪ್ಪ, ಸೋಮವಾರಪೇಟೆ, ಶಾಂತಳ್ಳಿ, ಸೂರ್ಲಬ್ಬಿ ಮೂಲಕ ಗರ್ವಾಲೆಯ ತನಕ ಬಳಸು ದಾರಿಯೊಂದಿಗೆ ಮಿನಿ ಬಸ್ ಹಾಕಲಾಗಿದ್ದು, ಗ್ರಾಮೀಣ ಜನತೆ ಬಳಸುದಾರಿಯಲ್ಲಿ ಮಡಿಕೇರಿ ಹಾಗೂ ದೂರದ ಗಾಳಿಬೀಡು ಪಂಚಾಯಿತಿಗೆÉ ಬಂದು ಹೋಗಲು ದಿನವಿಡೀ ಸಮಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆದಷ್ಟು ಬೇಗನೆ ಮಾದಾಪುರ- ಸೂರ್ಲಬ್ಬಿ ನಡುವೆ ನೇರ ಸಂಪರ್ಕಕ್ಕೆ ಪ್ರಯತ್ನಿಸಲಾಗುವದು ಎಂದು ಅವರು ಭರವಸೆ ನೀಡಿದರು. ಇನ್ನೊಂದೆಡೆ ಮಡಿಕೇರಿಯಿಂದ ಮಕ್ಕಂದೂರು, ಹಾಲೇರಿ, ಹಟ್ಟಿಹೊಳೆ ಮುಖಾಂತರ ಮಾದಾಪುರಕ್ಕೆ ಸಂಪರ್ಕ ರಸ್ತೆಯಲ್ಲೂ ಈಗಿನ ಮಳೆಯಿಂದ ಮತ್ತೆ ತೇವಾಂಶ ಉಂಟಾಗಿ ಬಸ್‍ಗಳ ಓಡಾಟಕ್ಕೆ ತೊಡಕು ಉಂಟಾಗು ವಂತಾಗಿದೆ ಎಂದು ‘ಶಕ್ತಿ’ಯೊಂದಿಗೆ ಗಮನ ಸೆಳೆದರು.
ಈ ಮಾರ್ಗದಲ್ಲಿ ಮಡಿಕೇರಿ ಸಾರಿಗೆ ಘಟಕ ವ್ಯವಸ್ಥಾಪಕಿ ಗೀತಾ ಖುದ್ದು ಮಿನಿಬಸ್‍ನಲ್ಲಿ ಸಂಚರಿಸಿ ರಸ್ತೆಮಾರ್ಗ ಪರಿಶೀಲಿಸಿದ್ದು, ಸಾರಿಗೆ ಪ್ರಾಧಿಕಾರದೊಂದಿಗೆ ಲೋಕೋಪ ಯೋಗಿ ಅಧಿಕಾರಿಗಳು ರಸ್ತೆ ಗುಣಮಟ್ಟದ ಬಗ್ಗೆ ಖಾತರಿ ನೀಡದೆ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ. ಕಾರಣ ಸಧ್ಯ ಗ್ರಾಮೀಣ ಜನತೆ ಬಸ್ ಸೌಕರ್ಯ ವಿಲ್ಲದೆ ಬಳಸುದಾರಿಯಲ್ಲೇ ಸಂಪರ್ಕ ಕಂಡುಕೊಳ್ಳುವಂತಾಗಿದೆ.