ಕೂಡಿಗೆ,s ಸೆ. 30: ಕೊಡಗಿನಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಹಾರಂಗಿ-ಕಾವೇರಿ ನದಿಗಳ ನೀರಿನ ಹೆಚ್ಚಳದ ಪರಿಣಾಮದಿಂದ ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆಯು ಹಾಳಾಗಿದ್ದು, ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರ ಅನುದಾನದಲ್ಲಿ ಶೀಘ್ರದಲ್ಲಿ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಹೆಬ್ಬಾಲೆಯಲ್ಲಿ ಪಿರಿಯಾಪಟ್ಟಣ ಮತ್ತು ಕೊಡಗಿನ ಸಂಪರ್ಕ ಕಲ್ಪಿಸಲು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಯನ್ನು ಪರಿಶೀಲನೆ ನಡೆಸಿ, ಸೇತುವೆಯ ಸಮೀಪಕ್ಕೆ ತಡೆಗೋಡೆ ಮತ್ತು ಮಣ್ಣು ಜರುಗುವಿಕೆಯಿಂದ ಉಂಟಾಗುವ ಅನಾಹುತವನ್ನು ತಪ್ಪಿಸಲು ಶಾಸಕರ ನಿಧಿಯಿಂದ ಹಣವನ್ನು ಭರಿಸಲಾಗುವದು. ಈ ಸೇತುವೆ ದುರಸ್ತಿಗೆ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್, ಕೂಡಿಗೆ ಗ್ರಾ.ಪಂ.ಯ ಉಪಾಧ್ಯಕ್ಷ ಗಿರೀಶ್ ಕುಮಾರ್, ಹೆಬ್ಬಾಲೆ ಗ್ರಾ.ಪಂ ಸದಸ್ಯರಾದ ವೆಂಕಟೇಶ್, ಶಿವನಂಜಪ್ಪ, ಕೂಡಿಗೆ ಬಿಜೆಪಿ ಬೂತ್ ಅಧ್ಯಕ್ಷ ಜಗದೀಶ್, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಬೊಮ್ಮೇಗೌಡ ಚಿಣ್ಣಪ್ಪ, ಕಣಿವೆಯ ಗ್ರಾಮಸ್ಥರಾದ ಪ್ರವೀಣ್, ಸಹದೇವ್, ಪಣಿ ಮತ್ತಿತರರು ಇದ್ದರು.