ಮಡಿಕೇರಿ, ಅ. 2: ಇಡೀ ಭಾರತ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಕೊಡಗು ಕ್ರೀಡಾ ಜಿಲ್ಲೆ ಎಂದು ಹೆಸರು ಮಾಡಿದೆ. ಏಷ್ಯನ್ ಗೇಮ್ಸ್ ಇರಲಿ, ಕಾಮನ್‍ವೆಲ್ತ್ ಕ್ರೀಡಾಕೂಟವಾಗಲಿ, ಒಲಂಪಿಕ್ಸ್‍ನಂತಹ ಕ್ರೀಡಾ ಕೂಟಗಳಾಗಲಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಪೈಕಿ ಕೊಡಗು ಜಿಲ್ಲೆಯ ಹುರಿಯಾಳುಗಳು ಇದ್ದೇ ಇರುತ್ತಾರೆ. ಕೇವಲ ಪ್ರಾತಿನಿಧ್ಯ ಮಾತ್ರವಲ್ಲ ದೇಶಕ್ಕೂ ಹತ್ತು ಹಲವಾರು ಕ್ರೀಡೆಗಳ ಪೈಕಿ ಪದಕಗಳನ್ನು ತಂದು ಕೊಡುತ್ತಾರೆ. ಕೊಡಗಿನ ಮೂಲದವರು ಇತ್ತೀಚೆಗಷ್ಟೆ ಇಂಡೋನೇಷಿಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಂದಿರುವದು ಇದೇ ಪ್ರಥಮ ಬಾರಿಗೆ ಐತಿಹಾಸಿಕವಾಗಿ 69 ಪದಕಗಳು. ಈ ಕ್ರೀಡೆಯಲ್ಲಿ ಪಾಲ್ಗೊಂಡ ಕೊಡಗಿನ ಮೂಲದವರು ಒಟ್ಟು ಏಳು ಮಂದಿಯಾಗಿದ್ದು, ಈ ಏಳು ಮಂದಿಯ ಪೈಕಿ ಆರು ಮಂದಿ ದೇಶಕ್ಕೆ ಪದಕ ತಂದು ಕೊಟ್ಟಿರುವದು ಇನ್ನೂ ಎಲ್ಲರ ನೆನಪಿನಲ್ಲಿದೆ. ಪ್ರತಿಷ್ಠಿತವಾದ ಕೇಂದ್ರ ಸರಕಾರದಿಂದ ಕೊಡಮಾಡಲ್ಪಡುವ ಅರ್ಜುನ ಪ್ರಶಸ್ತಿ ಕೊಡಗಿಗೆ ಈ ತನಕ 12 ಲಭಿಸಿದೆ. ಮಾತ್ರವಲ್ಲ ಪ್ರಸಕ್ತ ವರ್ಷ ಚೊಚ್ಚಲ ಬಾರಿಗೆ ದ್ರೋಣಾಚಾರ್ಯ ಪ್ರಶಸ್ತಿ ಕೂಡ ತರಬೇತುದಾರರೊಬ್ಬರಿಗೆ ದೊರೆತ್ತದೆ. ಇನ್ನು ರಾಜ್ಯ ಸರಕಾರದಿಂದ ನೀಡಲಾಗುವ ಏಕಲವ್ಯ ಪ್ರಶಸ್ತಿ ಪಡೆದವರ ಸಂಖ್ಯೆಯೂ ಅದೆಷ್ಟೋ ಇದೆ. ಈ ಎಲ್ಲಾ ಕಾರಣಗಳಿಂದಲೇ ಕೊಡಗನ್ನು ಕ್ರೀಡಾಜಿಲ್ಲೆ ಎನ್ನಲಾಗುತ್ತಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕೊಡಗಿನವರು ಪ್ರತಿನಿಧಿಸದ ಕ್ರೀಡೆಗಳೇ ಇಲ್ಲವೆನ್ನಬಹುದೇನೋ... ಆದರೆ
ಇಲ್ಲಿ ಎಲ್ಲವೂ ನಗಣ್ಯ (!)
ದೇಶದಲ್ಲಿ ವಿವಿಧ ರಾಜ್ಯಗಳು ಕ್ರೀಡೆಗೆ ಭಾರೀ ಒತ್ತು ನೀಡುತ್ತವೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ, ಉತ್ತೇಜನ, ಅವಕಾಶಗಳನ್ನು ನೀಡುತ್ತಿವೆ. ಆದರೆ ಕೊಡಗು ಜಿಲ್ಲೆಯವರು ಕ್ರೀಡೆಯಲ್ಲಿ ಅದೆಷ್ಟೋ ಕ್ರೀಡಾ ತೊಟ್ಟಿಲನ್ನು ತೂಗುತ್ತಿದ್ದರೂ ಈ ಜಿಲ್ಲೆಯನ್ನು ಸೂಕ್ತ ರೀತಿಯಲ್ಲಿ ಪರಿಗಣಿಸದಿರುವದು ವಿಪರ್ಯಾಸವೇ ಸರಿ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಕೊಡಗು ಎಲ್ಲಾ ರೀತಿಯಲ್ಲೂ ಕಡೆಗಣಿಸಲ್ಪಡುತ್ತಿವೆ ಎನ್ನಬಹುದು. ಇದಕ್ಕೆ ಜ್ವಲಂತ ಸಾಕ್ಷಿ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲೇ ಇರುವ ಜಿಲ್ಲಾ ಕ್ರೀಡಾಂಗಣ ಎಂದು ಯಾರೂ ಮೇಲ್ನೋಟಕ್ಕೆ ಹೇಳಬಹುದು. ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಾರೆ, ಭಾಷಣಗಳಲ್ಲಿ ಹೇಳುತ್ತಾರೆ. ಆದರೆ ಇದರೊಂದಿಗೆ ಸೂಕ್ತ ಅವಕಾಶವನ್ನೂ ಕಲ್ಪಿಸಬೇಕಲ್ಲವೇ? ಏನೂ ಇಲ್ಲದ ಪರಿಸ್ಥಿತಿಯಲ್ಲೂ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆಂದರೆ ಇನ್ನು ಅಗತ್ಯ ಉತ್ತೇಜನ ನೀಡಿದಲ್ಲಿ ಮತ್ತಷ್ಟು ಹೆಸರು ದೇಶಕ್ಕೆ ಬರುತ್ತದೆ ಎಂಬದನ್ನು ಯಾರೂ ಅರಿಯದಿರುವದು ದುರದೃಷ್ಟಕರ.
ಇಲ್ಲಿಗೊಮ್ಮೆ ಬಂದು ನೋಡಿ
ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯ ಹೃದಯ ಭಾಗದಲ್ಲೇ ವಿಶಾಲ ಪ್ರದೇಶದಲ್ಲಿ ಜಿಲ್ಲಾ ಕ್ರೀಡಾಂಗಣವಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಬರುವ ಈ ಕ್ರೀಡಾಂಗಣ ಆಟದ ಮೈದಾನಕ್ಕಿಂತ ಕಾಡು - ಹುಲ್ಲು ಆವರಿಸಿರುವ ಕಾಡಿನಂತಾಗುತ್ತಿದೆ. ಮುಖ್ಯ ಮೈದಾನವನ್ನು ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ, ಇದನ್ನು ಜಿಲ್ಲಾ ಕ್ರೀಡಾಂಗಣ ಎನ್ನಬೇಕೇ ಎಂಬ ಪ್ರಶ್ನೆ ಕಾಡುವದು ಸಹಜ. ಅದರಲ್ಲೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿ ಇರುವದು ಇದರ ಒತ್ತಿನಲ್ಲೇ.
ಈ ಕಚೇರಿಯ ಮುಂಭಾಗದಲ್ಲಿ ಬರುವ ಪ್ರದೇಶದಲ್ಲಿ ಬಾಸ್ಕೆಟ್‍ಬಾಲ್ ಕೋರ್ಟ್ ಒಂದಿದೆ ಎಂಬದು ಬೆಳಕಿಗೆ ಬಾರದು. ಏಕೆಂದರೆ ಇದು ಕಾಡಿನೊಳಗೆ ಇರುವಂತಿದೆ. ಇದರ ಪಕ್ಕದಲ್ಲಿ ಕೆಲವು ವರ್ಷಗಳ ಹಿಂದೆ ರೋಲರ್ ಸ್ಕೇಟಿಂಗ್ ಮೈದಾನವೊಂದನ್ನು ನಿರ್ಮಿಸಲಾಗಿದ್ದು, ಇದರ ಅಧ್ಯಕ್ಷರಾಗಿ ಜೀವನ್ ಚಿಣ್ಣಪ್ಪ ಅವರು ಇದ್ದ ಸಂದರ್ಭ ಒಂದಷ್ಟು ಲವಲವಿಕೆಯಿಂದ ಕೂಡಿತ್ತು.
(ಮೊದಲ ಪುಟದಿಂದ) ಇದೀಗ ಕೆಲವು ವರ್ಷದಿಂದ ಇದೂ ಕಾಡುಪಾಲಾಗುತ್ತಿದೆ.
ಐದಾರು ವರ್ಷಗಳ ಹಿಂದೆ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕೆಲವೇ ಸಮಯ ರಾಜ್ಯದ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ಸಂದರ್ಭ ಇಲ್ಲಿಗೆ ಒಂದು ಒಳಾಂಗಣ ಈಜುಕೊಳ, ಒಂದು ಬಾಕ್ಸಿಂಗ್ ಕೋರ್ಟ್, ಒಂದು ಸ್ಕ್ವಾಷ್ ಕೋರ್ಟ್ ಅನ್ನು ಮಂಜೂರು ಮಾಡುವಲ್ಲಿ ಯಶಸ್ಸು ಕಂಡಿದ್ದರು. ಮಳೆಗಾಲವೇ ಇರಲಿ ಇತರ ಋತುಗಳಲ್ಲೇ ಆಗಲಿ ಲಭ್ಯವಾಗಬೇಕಿದ್ದ ಈಜುಕೊಳ ಕಳೆದ ಹಲವು ತಿಂಗಳಿನಿಂದ ಮುಚ್ಚಲ್ಪಟ್ಟಿದೆ. ಇನ್ನು ಬಿಡುಗಡೆಯಾದ ಅನುದಾನ - ಯೋಜನೆಯಂತೆ ಈ ತನಕ ಬಾಗಿಲು ತೆರೆದಿರಬೇಕಾಗಿದ್ದ ಬಾಕ್ಸಿಂಗ್ ಕೋರ್ಟ್, ಸ್ಕ್ವಾಷ್ ಕೋರ್ಟ್‍ನ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಈ ಕಟ್ಟಡ ಅರ್ಧಕ್ಕೇನಿಂತಿದೆ.
ಇದರ ಎದುರಿನಲ್ಲಿ ಅಡೆ - ತಡೆಗಳ ನಡುವೆ ನಿರ್ಮಾಣವಾದ ಒಳಾಂಗಣ ಕ್ರೀಡಾಂಗಣವೊಂದಿದೆ. ಇಲ್ಲಿ ಕೆಲವು ಸಾರ್ವಜನಿಕರು ಆಟವಾಡುತ್ತಿರುವದರಿಂದ ಶಟಲ್‍ಕೋರ್ಟ್ ಬಳಕೆಯಲ್ಲಿದೆ. ಆದರೆ ಮಳೆ ಬಂದಾಗ ಮೇಲ್ಛಾವಣಿ ಸೋರುತ್ತಿರುವದರಿಂದ ಕ್ರೀಡಾಪಟುಗಳು ಸ್ವತಃ ಹಣ ಹಾಕಿ ರಕ್ಷಣೆಗೆ ಮೇಲೆ ಪ್ಲಾಸ್ಟಿಕ್ ಕಟ್ಟಿಕೊಂಡು ಆಡುವಂತಾಗಿದೆ. ಇನ್ನು ಒಳಾಂಗಣ ಕ್ರೀಡಾಂಗಣದ ಇತರ ಸೌಲಭ್ಯಗಳೂ ಪ್ರಯೋಜನವಿಲ್ಲದಂತಿದೆ. ಫುಟ್ಬಾಲ್ ಮೈದಾನದಲ್ಲಿ ಮಂಡಿಯ ತನಕ ಹುಲ್ಲು ಆವರಿಸಿದ್ದು, ಇದು ಜಾನುವಾರುಗಳಿಗೆ ಹುಲ್ಲುಗಾವಲಿನಂತಿದೆ.
ಮಾತಿನಲ್ಲಿ ಮಾತ್ರ ಅಥ್ಲೆಟಿಕ್ ಟ್ರ್ಯಾಕ್
ಜನರಲ್ ತಿಮ್ಮಯ್ಯ ಹೆಸರಿನ ಮುಖ್ಯ ಮೈದಾನದಲ್ಲಿ (ಮ್ಯಾನ್ಸ್ ಕಾಂಪೌಂಡ್) ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವದು ಎಂಬ ವಿಚಾರ ಹಲವು ವರ್ಷಗಳಿಂದ ಕೇವಲ ಬಾಯಿ ಮಾತಿನಲ್ಲಿ ಮಾತ್ರ ಉಳಿದಿದೆಯಲ್ಲದೆ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಇಲ್ಲ. ದಸರಾ ಸಂದರ್ಭ ಮೈದಾನದಲ್ಲಿ ವಾಹನ ನಿಲುಗಡೆಯಿಂದಲೂ ಮೈದಾನ ಹಾನಿಗೀಡಾಗುವದು ವರ್ಷಂಪ್ರತಿ ಮುಗಿಯದ ಗೋಳಾಗಿದೆ. ಈ ರೀತಿಯಲ್ಲಿ ಒಂದಲ್ಲಾ ಎರಡಲ್ಲಾ ಜಿಲ್ಲಾ ಕೇಂದ್ರದಲ್ಲೇ ಇರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿಯ ಕಣ್ಣಳತೆಯ ಸುತ್ತಲಲ್ಲೇ ಬರುವ ಜಿಲ್ಲಾ ಕ್ರೀಡಾಂಗಣದ ಕಥೆ ಶೋಚನೀಯವಾಗಿದ್ದು, ಇದು ಎಂದಿಗೂ ಸರಿಯಾಗಲಾರದೇನೋ ಎಂಬ ಭಾವನೆಯಲ್ಲಿ ಕ್ರೀಡಾಪಟುಗಳು ಇದ್ದಾರೆ.
ಗಮನಕ್ಕೆ ಬಾರದೇ...
ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವದಂತಹ ಸರಕಾರದ ಕಾರ್ಯಕ್ರಮಗಳು, ಹತ್ತು ಹಲವು ಕ್ರೀಡಾಕೂಟಗಳು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುತ್ತವೆ. ಈ ಸಂದರ್ಭ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಮತ್ತಿತರ ಪ್ರಮುಖರು ಆಗಮಿಸುತ್ತಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಕಂದಾಯ ಇಲಾಖಾ ನೌಕರರ ಕ್ರೀಡಾಕೂಟವೂ ಈ ಮ್ಯಾನ್ಸ್ ಕಾಂಪೌಂಡ್‍ನಲ್ಲೇ ನಡೆಯುತ್ತಿದೆ. ಮೇಲ್ಭಾಗದಲ್ಲಿರುವ ಬೃಹತ್ ಮೈದಾನ ಒಂದಷ್ಟು ನೋಡಲು ಪರವಾಗಿಲ್ಲ ಎನ್ನುವಂತಿರುತ್ತದೆ. ಆದರೆ ಮೇಲ್ನೋಟಕ್ಕೆ ಕಾಣುವದೇ ವಾಸ್ತವವಲ್ಲ. ಇಲ್ಲಿನ ಒಳ ಹೂರಣದ ಒಳಹೊಕ್ಕು ನೋಡಬೇಕಾಗಿದೆ ಎನ್ನುತ್ತಾರೆ ಕ್ರೀಡಾಪ್ರೇಮಿಗಳು.ವಸತಿ ಶಾಲೆಯ ಮಕ್ಕಳ ಗೋಳು
ಕಳೆದ ಕೆಲವು ವರ್ಷಗಳ ಹಿಂದೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಈ ಕಟ್ಟಡದಲ್ಲಿ ಕ್ರೀಡಾ ವಸತಿ ಶಾಲೆಯೊಂದನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ 5 ರಿಂದ 7ನೇ ತರಗತಿಯವರೆಗೆ 14 ಬಾಲಕಿಯರೂ ಸೇರಿ 40 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರಸ್ತುತ ಕನಿಷ್ಟ ಅಗತ್ಯತೆಯಾಗಿರುವ ಶೌಚಾಲವೇ ಇಲ್ಲವಾಗಿದೆ. ಇದ್ದ ಶೌಚಾಲಯ ಹಾನಿಗೀಡಾಗಿದ್ದು, ಇದೀಗ ಈಜುಕೊಳ ಮುಚ್ಚಲ್ಪಟ್ಟಿರುವರಿಂದ ಇದಕ್ಕೆ ಸಂಬಂಧಿಸಿದ ಶೌಚಾಲಯವನ್ನು ಬಳಸಲಾಗುತ್ತಿದೆ. ಈ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಆಹಾರ, ತರಬೇತಿಯ ವಿಚಾರದಲ್ಲೂ ದೂರುಗಳಿವೆ.