ಮಡಿಕೇರಿ, ಅ. 2: ಮರಗೋಡು ಬಿಜೆಪಿ ಸ್ಥಾನೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾನಡ್ಕ ತಿಲಕ್‍ರಾಜ್ (38) ಅವರನ್ನು ನಿನ್ನೆ ಸಂಜೆ ಗುಂಡಿಕ್ಕಿ ಕೊಲೆಗೈದಿರುವ ಆರೋಪಿ ಹಾಗೂ ಅಲ್ಲಿನ ಗ್ರಾ.ಪಂ. ಸದಸ್ಯ ಜೆಡಿಎಸ್‍ನ ಮುಂಡೋಡಿ ನಂದಾ ಅಲಿಯಾಸ್ ನಾಣಯ್ಯ (45) ಎಂಬಾತನನ್ನು ಪೊಲೀಸರು ಕೃತ್ಯ ನಡೆದ ಆರು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿಯು ದುಷ್ಕøತ್ಯಕ್ಕೆ ಬಳಸಿರುವ .32 ರಿವಾಲ್ವರ್ ಸಹಿತ ಒಂದು ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ನಿನ್ನೆ ಸಂಜೆ 5.30ರ ಸುಮಾರಿಗೆ ಮರಗೋಡುವಿನ ವಿಜಯ ಬ್ಯಾಂಕ್ ಎದುರು
(ಮೊದಲ ಪುಟದಿಂದ) ಕ್ಯಾಂಟೀನ್‍ವೊಂದರ ಬಳಿ ಮಡಿಕೇರಿ ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್ ಸೇರಿದಂತೆ ಆರೋಪಿ ನಾಣಯ್ಯ ಹಾಗೂ ಹೊಸ್ಕೇರಿ ಗ್ರಾ.ಪಂ. ಸದಸ್ಯ ಕಾನಡ್ಕ ಚಿದಂಬರ ಮತ್ತಿತರರು ಮಾತನಾಡುತ್ತಾ ನಿಂತಿದ್ದಾರೆ. ಈ ವೇಳೆ ಮುಂಡೋಡಿ ನಾಣಯ್ಯ (ನಂದಾ) ಚಿದಂಬರ ಅವರನ್ನು ಪಕ್ಕಕ್ಕೆ ಕರೆದೊಯ್ದು ಏನೋ ಮಾತು ಆರಂಭಿಸುವಷ್ಟರಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ತಿಲಕ್‍ರಾಜ್ ಅಲ್ಲಿಗೆ ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ವೇಳೆ ಬೈಕ್‍ನಿಂದ ಇಳಿದ ತಿಲಕ್‍ರಾಜ್ ‘ಏನು ನಂದಾ ಬಾವ ನನ್ನ ಬಗ್ಗೆ ಏನೋ ಮಾತನಾಡುತ್ತಿರು ವಂತಿದೆ’ ಎಂದು ಕೇಳಿ ಹೆಜ್ಜೆ ಮುಂದಿಡುತ್ತಿದ್ದಂತೆಯೇ, ‘ನನ್ನ ಬಗ್ಗೆ ಏನೇನೋ ಹೇಳುವ ನೀನು... ಇನ್ನು ಮುಂದೆ ಹೇಳದಂತೆ ಮಾಡುವೆ’ ಎನ್ನುತ್ತಲೇ ಕಿಸೆಯಿಂದ ರಿವಾಲ್ವರ್ ತೆಗೆದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಹಠಾತ್ ಆರೋಪಿಯು ಗುಂಡು ಹಾರಿಸಿದ ಪರಿಣಾಮ ಕಂಗಾಲಾದ ತಿಲಕ್‍ರಾಜ್ ಕ್ಷಣಮಾತ್ರ ದಲ್ಲಿ ಕ್ಯಾಂಟೀನ್‍ನೊಳಗೆ ಧಾವಿಸಿದ್ದು, ಎಡಭಾಗದ ಎದೆಯಿಂದ ಚಿಮ್ಮಿದ ರಕ್ತವನ್ನು ಅದುಮಿಟ್ಟು ಕೊಳ್ಳುತ್ತಲೇ ಕುಸಿದು ಬಿದ್ದಿದ್ದಾರೆ. ಕ್ಯಾಂಟೀನ್‍ನಲ್ಲಿದ್ದ ಅನೇಕರು ಭಯಭೀತರಾಗಿ ಹೊರಗೆ ಓಡಿ ಹೋಗಿದ್ದಾರೆ. ಸ್ನೇಹಿತರು ಕೂಡಲೇ ತಿಲಕ್‍ರಾಜ್‍ನನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿದೆ.
ಪೂರ್ವ ನಿಯೋಜಿತ ಕೃತ್ಯ : ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಆರೋಪಿಗೂ ಮೃತ ವ್ಯಕ್ತಿಗೂ ಕಳೆದ ಹಲವು ವರ್ಷಗಳಿಂದ ದ್ವೇಷವಿದ್ದುದಾಗಿ ವಿಚಾರಣೆ ಸಂದರ್ಭ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಖಚಿತ ಪಡಿಸಿದ್ದಾರೆ. ಅಲ್ಲದೆ ಆರೋಪಿಯ ಹೇಳಿಕೆ ದಾಖಲಿಸಿಕೊಂಡಿರುವದಾಗಿ ಮಾಹಿತಿ ನೀಡಿದ್ದಾರೆ.
ಆರೋಪಿಯು ಕೃತ್ಯಕ್ಕೆ ಬಳಸಿರುವ ಡಸ್ಟರ್ ಕಾರು (ಕೆ.ಎ. 12 ಝೆಡ್ 9088) ಹಾಗೂ ಸಜೀವ ಗುಂಡುಗಳಿರುವ ರಿವಾಲ್ವರ್‍ನೊಂದಿಗೆ ದ್ವಿಚಕ್ರ ವಾಹನ (ಕೆ.ಎ. 12 ಇ. 7547)ವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಕೊಲೆ ಎಸಗಿರುವ ನಂದಾ ನಾಣಯ್ಯ ಕಾರನ್ನು ಮನೆಯಲ್ಲಿ ನಿಲ್ಲಿಸಿ, ಬೈಕ್‍ನಲ್ಲಿ ಮಡಿಕೇರಿಯತ್ತ ರಿವಾಲ್ವರ್ ಸಹಿತ ಬರುತ್ತಿದ್ದ ವೇಳೆ ನಗರದ ಸುದರ್ಶನ ವೃತ್ತದಿಂದ ಅನತಿ ದೂರದ ರಸ್ತೆ ತಿರುವಿನಲ್ಲಿ ರಾತ್ರಿ ಸೆರೆಸಿಕ್ಕಿದ್ದಾಗಿ ಪೊಲೀಸರು ಖಾತರಿ ಪಡಿಸಿದ್ದಾರೆ.
ಮೃತರ ಸಂಬಂಧಿ ಕಾನಡ್ಕ ಚಿದಂಬರ ನೀಡಿರುವ ದೂರಿನ ಮೇರೆಗೆ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪ ವಿಭಾಗದ ಉಪಾಧೀಕ್ಷಕ ಕೆ.ಎಸ್. ಸುಂದರ್‍ರಾಜ್ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕ ಎಂ.ಎಂ. ಭರತ್, ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ವಿ. ಚೇತನ್ ಹಾಗೂ ಎಎಸ್‍ಐ ರಾಜು, ಕಿರಣ್, ಇಬ್ರಾಹಿಂ, ಸತೀಶ್, ಹನೀಫ್, ಶಿವರಾಜೇಗೌಡ, ಚಾಲಕರುಗಳಾದ ಮೋಹನ್ ಹಾಗೂ ಅರುಣ್ ಅವರುಗಳು ಪತ್ತೆಹಚ್ಚಿದ್ದಾರೆ. ಇವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಹತ್ಯೆ ಖಂಡಿಸಿ ಪ್ರತಿಭಟನೆ
ಮರಗೋಡು ಬಿಜೆಪಿ ಸ್ಥಾನೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾನಡ್ಕ ತಿಲಕ್ ರಾಜ್ ಹತ್ಯೆಯನ್ನು ಖಂಡಿಸಿದ ಶಾಸಕದ್ವಯರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಗೃಹ ಸಚಿವ ಪರಮೇಶ್ವರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ನಿನ್ನೆ ಸಂಜೆ ಮರಗೋಡು ಬಿಜೆಪಿ ಸ್ಥಾನೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾನಡ್ಕ ತಿಲಕ್ ರಾಜ್ ಅವರನ್ನು ಜೆಡಿಎಸ್‍ನ ಮರಗೋಡು ಗ್ರಾ.ಪಂ.ಸದಸ್ಯ ನಂದಾ ನಾಣಯ್ಯ ಗುಂಡಿಕ್ಕಿ ಕೊಲೆಗೈದಿರುವದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಜ.ತಿಮ್ಮಯ್ಯ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಪ್ರಾಮಾಣಿಕರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲ, ವ್ಯವಸ್ಥಿತವಾಗಿ ಪ್ರಾಮಾಣಿಕರ ಹತ್ಯೆ ಮಾಡಲಾಗುತ್ತಿದೆ. ದಂಧೆಕೋರ ರಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರಲ್ಲದೆ, ಕಾನೂನು ಕಾಪಾಡಲು ಸಾಧ್ಯವಾಗದಿ ದ್ದರೆ ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ರಾಜ್ಯದಲ್ಲಿ ಗೂಂಡಾಗಳ ಹಾವಳಿ ಹೆಚ್ಚಾಗುತ್ತಿದೆ. ಜೆಡಿಎಸ್ ಗೂಂಡಾಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರಲ್ಲದೆ, ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿ ವಿರುದ್ಧ ಧಂಗೆ ಏಳುವ ಬೆದರಿಕೆ ಒಡ್ಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗೂಂಡಾಗಳನ್ನು ಬೆಳೆಸುತ್ತಿದ್ದು, ಸರ್ಕಾರದ ವಿರುದ್ಧ ಬಿಜೆಪಿ ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ಸಂದರ್ಭ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಪ್ರಧಾನ ಕಾರ್ಯದರ್ಶಿಗಳಾದ ರಾಬಿನ್ ದೇವಯ್ಯ, ಬಾಲಚಂದ್ರ ಕಳಗಿ, ರವಿ ಕಾಳಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ನಗರ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಜಗದೀಶ್, ಉಮೇಶ್ ಸುಬ್ರಮಣಿ, ಪ್ರಮುಖರಾದ ಎಸ್.ಸಿ.ಸತೀಶ್, ಮರಗೋಡು ಗ್ರಾಮಸ್ಥರು ಹಾಗೂ ಬಿಜೆಪಿ ಪ್ರಮುಖರಾದ ಕಾಂಗೀರ ಸತೀಶ್, ರಘು ಆನಂದ, ಬೆಳ್ಯಪ್ಪ, ಕಾನಡ್ಕ ಅನೀಶ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಹಾಗೂ ಇತರರು ಇದ್ದರು.