ಮಡಿಕೇರಿ, ಸೆ. 30: ಕೊಡವ ಸಮಾಜ ಸಭಾಂಗಣದಲ್ಲಿ ಕೊಡವ ವಿದ್ಯಾನಿಧಿ 17-18 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ನಿನ್ನೆ ನಡೆಯಿತು. ಕೊಡಗಿನ ಕುರಿತು ಯುವ ಜನಾಂಗಕ್ಕೆ ಹೆಚ್ಚಿನ ಅರಿವು ಮೂಡಿಸಲು ಕೊಡಗಿನ ಖ್ಯಾತ ಸಾಹಿತಿಗಳು, ಲೇಖಕರು ಹಾಗೂ ಅವರ ಕೃತಿಗಳ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದು ಮುಖ್ಯ ಅತಿಥಿಗಳಾಗಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಚೆಪ್ಪುಡೀರ ಕಿರಣ್ ಕುಶಾಲಪ್ಪ ಅಭಿಪ್ರಾಯಪಟ್ಟರು.
ಕೊಡಗಿನ ಹಲವು ಮಂದಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಕೊಡಗಿನ ಬಗ್ಗೆ ಹೆಚ್ಚು ಅರಿವಿಲ್ಲದ ಯುವ ಪೀಳಿಗೆಗೆ ಕೊಡಗಿನ ಬಗ್ಗೆ ಹೆಚ್ಚು ಅಭಿಮಾನವೂ ಇಲ್ಲ. ಇಂದಿನ ಪೀಳಿಗೆಗೆ ಕೊಡಗಿನ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಪೋಷಕರು ಕಾರ್ಯೋನ್ಮುಖರಾಗಬೇಕು. ಈ ನಿಟ್ಟಿನಲ್ಲಿ ಕೊಡಗಿನ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಹಾಗೂ ಇತರೆ ಕವಿಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಇದರೊಂದಿಗೆ ಪಟ್ಟೋಳೆ ಪಳಮೆಯಂತಹ ಕೃತಿಯನ್ನು ಅಧ್ಯಯನ ಮಾಡುವಂತೆ ಮಕ್ಕಳಿಗೆ ತಿಳಿಸಬೇಕು. ವಿವಾಹವಾಗುವ ನೂತನ ದಂಪತಿಗಳಿಗೂ ಕೊಡಗಿನ ಶ್ರೇಷ್ಟತೆಯನ್ನು ಸಾರುವ ಕೃತಿಯನ್ನು ಉಡುಗೊರೆಯಾಗಿ ನೀಡುವದು ಸೂಕ್ತವೆಂದು ಅಭಿಪ್ರಾಯಪಟ್ಟರು.
ಆಸ್ತಿ ಮಾರಾಟ ಬೇಡ: ಎಷ್ಟೇ ವಿದ್ಯಾವಂತರಾದರೂ ಕೂಡ ಕೊಡಗಿನವರು ತಮ್ಮ ಆಸ್ತಿಯನ್ನು ಯಾವದೇ ಕಾರಣಕ್ಕೂ ಮಾರಟ ಮಾಡಬಾರದು. ಕೊಡಗಿನ ಭೂಮಿಯಲ್ಲಿ ಉತ್ಪತಿ ಇಲ್ಲ ಎಂಬ ಭಾವನೆ ಬೇಡ. ಇಲ್ಲಿನ ಆಸ್ತಿಯ ನಿರ್ವಹಣೆ ಮಾಡಲು ತೊಂದರೆ ಇದೆ ಎಂಬುವವರು ನಮ್ಮ ಗಮನಕ್ಕೆ ತನ್ನಿ. ಅದರ ಜವಾಬ್ದಾರಿ ವಹಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದರು.
ಪೋಷಕರು ಓದಿನ ವಿಚಾರವಾಗಿ ತಮ್ಮ ಮಕ್ಕಳ ಮೇಲೆ ಯಾವದೇ ಕಾರಣಕ್ಕೂ ಒತ್ತಡ ಹೇರಬಾರದು. ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶ ನೀಡಬೇಕು. ಪ್ರಸ್ತುತ ಕಾಲ ಘಟ್ಟದಲ್ಲಿ ಪ್ರತಿಯೊಂದು ವೃತ್ತಿಯನ್ನು ಫ್ಯಾಷನ್ ಆಗಿ ನಿರ್ವಹಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳ ಮೇಲೆ ಒತ್ತಡ ಸಲ್ಲದು ಎಂದರು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ನಂತರದಲ್ಲಿ ವಿದ್ಯಾರ್ಥಿಗಳ ಸಾಮಥ್ರ್ಯ ಅರಿಯಲು ವೃತ್ತಿಪರ ಕೌನ್ಸಿಲ್‍ಗಳಿವೆ. ವಿದ್ಯಾರ್ಥಿಗಳು ಇಲ್ಲಿ ಸಲಹೆ ಸೂಚನೆಗಳನ್ನು ಪಡೆದು ಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇಂದು ಕೊಡಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಜಿಲ್ಲೆಯಲ್ಲಿಯೇ ನಾನಾ ಅವಕಾಶಗಳಿವೆ. ಆದರೆ ಮೆಡಿಕಲ್ ಕಾಲೇಜು, ಅರಣ್ಯ ವಿದ್ಯಾಲಯದಲ್ಲಿ ಕೇವಲ ಬೆರಳೆಣಿಕೆಯ ಕೊಡಗಿನ ಮಂದಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇವರ ಸಂಖ್ಯೆ ಹೆಚ್ಚುವಂತೆ ಆಗಬೇಕು. ಕೊಡಗಿನಲ್ಲಿರುವ ಶೈಕ್ಷಣಿಕ ಸೌಲಭ್ಯವನ್ನು ವಿದ್ಯಾರ್ಥಿಗಳು ಸೂಕ್ತವಾಗಿ ಬಳಸಿಕೊಂಡು ಉನ್ನತ ಮಟ್ಟಕ್ಕೇರುವಂತಾಗಬೇಕು ಎಂದರು. ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಹಲವು ಮಂದಿ ಎಲ್ಲವನ್ನು ಕಳೆದುಕೊಂಡಿದ್ದಾರೆ. ಈಗ ಅದರ ಮರುನಿರ್ಮಾಣದೊಂದಿಗೆ ಇರುವ ಭೂಮಿಯನ್ನು ಉಳಿಸಿ ಕೊಂಡು ಹೋಗಲು ಮುಂದಾಗ ಬೇಕಿದೆ. ಈ ಕಾರ್ಯವನ್ನು ಹೇಗೆ ಮಾಡಬೇಕು ಎಂಬ ಚಿಂತನೆ ಅಗತ್ಯ ಎಂದರು. ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ಡೀನ್ ಕಂಜಿತಂಡ ಸುನೀಲ್ ಮುದ್ದಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ ಸಾಧಿಸುವ ತವಕ ಇರಬೇಕು. ತಮ್ಮ ಗುರಿ ಸಾಧನೆಯತ್ತ ಗಮನವಿರಬೇಕು. ಪ್ರತಿಯೊಬ್ಬರು ಕೂಡ ಆರೋಗ್ಯಯುತವಾಗಿ ಸಂತೋಷ ದಿಂದ ಉತ್ತಮ ಬದುಕನ್ನು ಸಾಗಿಸಲು ಪ್ರಯತ್ನಿಸುತ್ತಾನೆ. ಅದಕ್ಕೆ ವಿದ್ಯಾರ್ಥಿ ಜೀವನದಿಂದಲೇ ಶ್ರಮ ಅಗತ್ಯ ಎಂದರು. ಬದುಕಿನಲ್ಲಿ ಪ್ರತಿಯೊಬ್ಬ ರಿಗೂ ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ. ಜೀವನದಲ್ಲಿ ಕಷ್ಟಗಳೇ ಇಲ್ಲದ ವ್ಯಕ್ತಿಗಳು ಯಾರೂ ಇಲ್ಲ. ಮಾನಸಿಕವಾಗಿ ಸದೃಡರಾಗಿದ್ದಲ್ಲಿ ಎಲ್ಲ ಸಮಸ್ಯೆಗಳನ್ನು ಎದುರಿಸಲು ಸಾಧ್ಯವೆಂದು ಹೇಳಿದ ಅವರು, ನಮ್ಮ ಬದುಕನ್ನು ರೂಪಿಸಿಕೊಳ್ಳುವದು ನಾವೇ, ಆದರಿಂದ ನಮ್ಮ ಗುರಿಯತ್ತ ಚಿತ್ತವಿರಬೇಕು ಎಂದರು.
ಭಗವದ್ಗೀತೆಯ ಕೆಲ ಸಾಲುಗಳನ್ನು ಉಲ್ಲೇಖಿಸುವ ಮೂಲಕ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿ ಹೇಳಿದರು. ಇದೇ ಸಂದರ್ಭ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಪಿ ಉತ್ತಪ್ಪ ಸ್ವಾಗತಿಸಿ, ಮಾತನಾಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಮೇದುರ ಕಾವೇರಪ್ಪ ಇದ್ದರು.
ಶಿಕ್ಷಣವನ್ನು ಉತ್ತೇಜಿಸು ವದಕ್ಕಾಗಿಯೇ ಕೊಡಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವದಕ್ಕಾಗಿ ಸ್ಥಾಪನೆಗೊಂಡ ಸಂಸ್ಥೆ ಕೊಡವ ವಿದ್ಯಾನಿಧಿ. ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಲು ಅಗತ್ಯವಿರುವ ಸಹಕಾರವನ್ನು ನೀಡಲು ನಿ ಯೋಜನೆಯನ್ನು ಕೂಡ ರೂಪಿಸುತ್ತಿದೆ. ಮಡಿಕೇರಿಯಲ್ಲಿ ಒಂದೇ ಶಿಕ್ಷಣ ಕೇಂದ್ರವಾಗಿ ಸರಕಾರಿ ಸೆಂಟ್ರಲ್ ಹೈಸ್ಕೂಲ್ ಇದ್ದ ಕಾಲದಲ್ಲಿ ವಿದ್ಯಾನಿಧಿ ಸ್ಥಾಪನೆಯಾಗಿದೆ. ಪ್ರಸ್ತುತ 7,15,01,803 ರೂ ಗಳ ಉಳಿತಾಯವಿದ್ದು, ವಿದ್ಯಾರ್ಥಿಗಳ ಬಾಳಿಗೆ ಇದು ನೆರವಾಗುತ್ತಿದೆ. ಹಲವು ವಿದ್ಯಾರ್ಥಿ ಗಳಿಗೆ ನೆರವಾದ ವಿದ್ಯಾನಿಧಿ 2013 ನೇ ಸಾಲಿನಲ್ಲಿ 150 ವರ್ಷಗಳ ಸಂಭ್ರಮವನ್ನಾಚರಿಸಿಕೊಂಡಿತು.
ನಿನ್ನೆಯ ಕಾರ್ಯಕ್ರಮದಲ್ಲಿ ನಾನಾ ವಿಭಾಗದಲ್ಲಿ ಸಾಧನೆಗೈದ ಪಾಸುರ ಅರ್ನವ್ ಅಯ್ಯಪ್ಪ, ಅಪ್ಪಚೆಟ್ಟೋಳಂಡ ವಿಜಯ್ ತಿಮ್ಮಯ್ಯ, ಪೊಯ್ಯೇಟೀರ ಗೋಕುಲ್ ತಿಮ್ಮಯ್ಯ, ಕಾಯಪಂಡ ಯುಕ್ತಾ, ಮಾಳೆಯಂಡ ಬಿಂದ್ಯ ಕಾವೇರಮ್ಮ, ಕುಪ್ಪಂಡ ಚೇತನಾ, ಸಣ್ಣುವಂಡ ರಿಶಿರ, ಬಾಳಿಯಡ ಗಣಪತಿ ಅನ್ವಿತ್, ನೆಲ್ಲಿರ ತಶ್ವಿನ್ ಅಯ್ಯಪ್ಪ, ಇಟ್ಟೀರ ಮಾನಸ್ ಮುತ್ತಪ್ಪ, ಬಿದ್ದಂಡ ಮೋಹಿತ್ ನಂಜಪ್ಪ, ಉದ್ದಪಂಡ ಗೌತಮಿ ತಂಗಮ್ಮ, ಅಪ್ಪಚ್ಟ್ಟೋಳಂಡ ಪೂವಯ್ಯ ವಿಖ್ಯಾತ್, ಅಜ್ಜನಿಕಂಡ ಶಿಬಿನ್, ಅಚ್ಚಕಾಳೇರ ಪ್ರೀತು ಗೌರಮ್ಮ, ಚೀಯಕ್‍ಪೂವಂಡ ವಿಶ್ಮಾ ಮುತ್ತಮ್ಮ, ಕಬ್ಬಚ್ಚೀರ ಅಕ್ಷಿ, ತೋಲಂಡ ತಾರಾನ, ಅಜ್ಜಿಕುಟ್ಟಿರ ಅದಿತ್ ಕಾರ್ಯಪ್ಪ, ಪಾಲಚಂಡ ಪೂಜಿತ, ಕುಕ್ಕೇರ ಶಾಯರಿ, ಕೊಟ್ಟಂಗಡ ಮೋನಿಶಾ ಪೂವಮ್ಮ, ಬೊಳ್ಳಚೀಟ್ಟಿರ ಸುರೇಶ್ ಮಂದಣ್ಣ, ಅಪ್ಪಚೆಟ್ಟೋಳಂಡ ದಿವ್ಯ ದೇಚಮ್ಮ, ಕುಂಞರ ಶಾಯನಿ ದೇಚಮ್ಮ, ಅಂಜಪರವಂಡ ಚಿಣ್ಣಪ್ಪ ಪವನ್, ಮುಂಡಂಡ ನಾಣಯ್ಯ ಶ್ರಾಯನ, ಮುಕ್ಕಾಟೀರ ಪ್ರಸನ್ನ ಅಪೂರ್ವ ಹಾಗೂ ಕೆಚ್ಚಟೀರ ಬೋಪಯ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.