ವೀರಾಜಪೇಟೆ, ಸೆ. 29: ಅಪರಾಧ ತಡೆಯುವಲ್ಲಿ ಆಟೋ ಚಾಲಕರ ಪಾತ್ರ ಮಹತ್ವವಾದದ್ದು, ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ್ ಲಕ್ಷ್ಮಣ್ ಅಂಚಿ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ನಗರ ಪೊಲೀಸ್ ಠಾಣೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ದೂರು ಸಂತ್ರಸ್ತರ ಪರಿಹಾರ ಯೋಜನೆ ಬಗ್ಗೆ ಕಾನೂನು ಅರಿವು ಹಾಗೂ ಆಟೋ ಚಾಲಕರಿಗೆ ವ್ಯೆಯಕ್ತಿಕ ಮಾಹಿತಿ ಪ್ರದರ್ಶನ ಫಲಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಪಘಾತ ಹಲ್ಲೆ ಸೇರಿದಂತೆ ವಿವಿಧ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾದ ಮೇಲೆ ಸಂತ್ರಸ್ತರಿಗೆ ಆರೋಪಿಯಿಂದ ಪರಿಹಾರ ನ್ಯಾಯಾಲಯವೇ ಕೊಡಿಸುತ್ತದೆ. ಆಟೋ ಚಾಲಕರೆಲ್ಲರೂ ಉತ್ತಮ ನಡತೆಯವರೇ ಆದರೆ ಕೆಲವರು ಮಾಡುವ ತಪ್ಪಿನಿಂದ ಎಲ್ಲ ಆಟೋ ಚಾಲಕರು ತಲೆ ತಗ್ಗಿಸುವಂತಾಗುತ್ತದೆ. ಆಟೋಗಳ ಹಿಂಬದಿ ಮಾಹಿತಿ ಪ್ರದರ್ಶನ ಫಲಕವನ್ನು ಅಳವಡಿಸುವದರಿಂದ ಪ್ರಯಾಣಿಕರಿಗೆ ಆಟೋ ಚಾಲಕರ ಸಂಪೂರ್ಣ ಮಾಹಿತಿ ಲಭಿಸಿದಂತಾ ಗುತ್ತದೆ ಎಂದು ಹೇಳಿದರು. ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಎಂ ನಂಜಪ್ಪ ಮಾತನಾಡಿ ಆಟೋ ಚಾಲಕರು ಎಂದರೆ ಸಾರ್ವಜನಿಕರಿಗೆ ಸರಳ ಸೇವೆ ಮಾಡುವವರು ಎಂದು ಕೊಂಡಿದ್ದಾರೆ. ನಾಗರಿಕರೊಂದಿಗೆ ಸದ್ಭಾವನಾ ರೀತಿಯಲ್ಲಿ ವರ್ತನೆ ಮಾಡದಿದ್ದರೆ ಚಾಲಕರ ಗಳಿಕೆ ಕಡಿಮೆಯಾಗುತ್ತದೆ. ನಿಷ್ಠೆಯಲ್ಲಿ ಇರದಿದ್ದರೆ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗುತ್ತದೆ. ಸಾರ್ವಜನಿಕರೊಂದಿಗೆ ಪ್ರಾಮಾಣಿಕತೆ ದಕ್ಷತೆಯಿಂದ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ವಕೀಲೆ ಅನುಪಮಾ ಕಿಶೋರ್ ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಉಪಸ್ಥಿತರಿದ್ದರು.