ಸೋಮವಾರಪೇಟೆ, ಸೆ. 29: ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ತತ್ತರಿಸಿರುವ ಹಿನ್ನೆಲೆ ಈ ಬಾರಿ ಜಿಲ್ಲಾ ಮಟ್ಟದ ವೀರಶೈವ ಕ್ರೀಡಾಕೂಟವನ್ನು ರದ್ದುಪಡಿಸಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲು ಜಿಲ್ಲಾ ವೀರಶೈವ ಮಹಾಸಭಾ ನಿರ್ಧರಿಸಿದೆ.

ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಸಭೆಯು ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪನವರ ಅಧ್ಯಕ್ಷತೆಯಲ್ಲಿ ಗುಡುಗಳಲೆಯ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು.

ಶೇ. 90ಕ್ಕಿಂತ ಹೆಚ್ಚಿಗೆ ಅಂಕಗಳಿಸಿದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸರಳ ಕಾರ್ಯಕ್ರಮದ ಮೂಲಕ ರಾಜ್ಯ ವೀರಶೈವ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಯಿತು. ಜಿಲ್ಲಾ ವೀರಶೈವ ಮಹಾಸಭಾದಿಂದ ಮುಂದಿನ ವರ್ಷ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು.

ಅ.27ರಂದು ಪ್ರತಿಭಾ ಪುರಸ್ಕಾರ: ಅ. 27ರಂದು ಬೆಳಿಗ್ಗೆ 11 ಗಂಟೆಗೆ ಕೊಡ್ಲಿಪೇಟೆ ಕಿರಿಕೊಡ್ಲಿ ಶಾಲೆಯ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದಿನ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಮಠಾಧೀಶರುಗಳು ಉಪಸ್ಥಿತರಿದ್ದು, ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಎಸ್.ಎಸ್.ಎಲ್.ಸಿ. ಯಲ್ಲಿ ಹೆಚ್ಚಿನ ಅಂಕಗಳಿಸಿದ ಜಿ. ಲೀಶಾ, ಎಸ್. ಸರಿತ, ಸಿ. ಚಂದು, ಎಸ್.ಎಂ. ಚರಣ್, ಕೆ.ಎನ್. ತನುಶ್ರೀ, ಪಿ.ಯು.ಸಿ.ಯಲ್ಲಿ ದೀಪಿಕಾ ಮೂರ್ತಿ, ಎಸ್.ಎಸ್. ಗೌತಮ್, ಟಿ.ಎಂ. ಪೂಜಾ, ಹೆಚ್.ಜಿ. ಸೌಂದರ್ಯ, ಎ.ವಿ. ಆಕಾಶ್, ಮಣಿಕಂಠ ಅಮರೇಶ್ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಜಿಲ್ಲಾಧ್ಯಕ್ಷ ಧರ್ಮಪ್ಪ ತಿಳಿಸಿದರು.

ವೇದಿಕೆಯಲ್ಲಿ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಮುದ್ದಿಕಟ್ಟೆ ಮಠಾಧೀಶ ಅಭಿನವ ಸಿದ್ದಲಿಂಗ ಸ್ವಾಮೀಜಿ, ಶಿಡಿಗಳಲೆ ಮಠಾಧೀಶರಾದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜು, ಉಪಾಧ್ಯಕ್ಷ ಎಸ್.ಎಸ್. ಸುರೇಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ್, ಪ್ರಮುಖರುಗಳಾದ ರಾಜೇಶ್ವರಿ ನಾಗರಾಜ್, ಜಲಜಾ ಶೇಖರ್, ಯತೀಶ್, ಸುಮಾ ಸುದೀಪ್, ಉಷಾ ತೇಜಸ್ವಿ, ಮಮತಾ ಸತೀಶ್, ಲತಾ ಮಂಜುನಾಥ ಹಾಗೂ ಮುಂತಾದವರು ಉಪಸ್ಥಿತರಿದ್ದರು.