ಕುಶಾಲನಗರ, ಸೆ. 29: ಕುಶಾಲನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಾಯಿ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ಅಕ್ಟೋಬರ್ 10 ರಿಂದ ಎರಡು ದಿನಗಳ ಕಾಲ ನಡೆಯಲಿದೆ ಎಂದು ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಶಾಲನಗರ ದೇವಾಲಯಗಳ ಒಕ್ಕೂಟ ಹಾಗೂ ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ದಿನಾಂಕ 10 ರಿಂದ 12 ರ ತನಕ ಪ್ರತಿದಿನ ಸಾಯಿ ಬಡಾವಣೆಯಲ್ಲಿರುವ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿದೆ. ದಿನಾಂಕ 10 ರಂದು ಮಹಾಗಣಪತಿ ಪೂಜೆ, 11 ರಂದು ಕಲಶಾಭಿಷೇಕ, ವಿಗ್ರಹ ಪ್ರತಿಷ್ಠಾಪನೆ ನಡೆಯಲಿದ್ದು 12 ರಂದು ಸಾಯಿ ಸಹಸ್ರ ನಾಮ ಹೋಮ, ಪೂರ್ಣಾಹುತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ದಿನಾಂಕ 11 ರಂದು ಬೆಳಿಗ್ಗೆ 9 ಗಂಟೆಯಿಂದ ವಿಗ್ರಹಕ್ಕೆ ಅಭಿಷೇಕ ಮಾಡುವ ಅವಕಾಶ ಭಕ್ತಾದಿಗಳಿಗೆ ಕಲ್ಪಿಸಲಾಗಿದ್ದು ಈ ಸೇವೆ ಮಾಡಲು ಇಚ್ಛಿಸುವ ದಂಪತಿಗಳು ರೂ. 1001 ಮುಂಗಡ ನೀಡಿ ಪೂಜೆಗೆ ಅವಕಾಶ ಪಡೆಯಬಹುದು ಎಂದರು. ಅಭಿಷೇಕ ಮಾಡುವ ದಂಪತಿಗಳು ಕಡ್ಡಾಯವಾಗಿ ಪಂಚೆ, ಶಲ್ಯ, ಸೀರೆ ಧರಿಸುವದರೊಂದಿಗೆ ಪಾಲ್ಗೊಳ್ಳಬೇಕೆಂದರು. ಮೂರು ದಿನಗಳ ಕಾಲ ವಿವಿಧ ಸೇವೆಗಳ ಕೌಂಟರ್‍ಗಳನ್ನು ತೆರೆಯಲಾಗಿದ್ದು ಭಕ್ತಾದಿಗಳು ತನು, ಧನ, ಮನಗಳ ಸಹಕಾರದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೂಜೋತ್ಸವದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು. ಗೋಷ್ಠಿಯಲ್ಲಿ ಶಿರಡಿ ಸಾಯಿ ಟ್ರಸ್ಟ್ ಅಧ್ಯಕ್ಷರಾದ ಧರೇಶ್ ಬಾಬು, ಎಸ್.ಎಲ್. ಶ್ರೀಪತಿ, ಆದಿಶೇಷರೆಡ್ಡಿ, ಶ್ರೀನಿವಾಸ್, ಮುನಿಸ್ವಾಮಿ, ಚಂದ್ರಶೇಖರ್, ಓಬುಳ ರೆಡ್ಡಿ ಇದ್ದರು.