ಕುಶಾಲನಗರ, ಸೆ. 29: ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಗರ್ಭಿಣಿಯರು ಅತ್ಯವಶ್ಯಕ ಪೌಷ್ಟಿಕಾಂಶಗಳ ಆಹಾರ ಪದ್ಧತಿ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಶಾಲನಗರ ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಪೋಷಣಾ ಅಭಿಯಾನದ ಪೌಷ್ಟಿಕಾಂಶದ ಶಿಬಿರ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಗರ್ಭಾವಧಿ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದೆ. ಈ ಸಂದರ್ಭ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸುಧಾರಣೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರವಿಚಂದ್ರ ಮಾತನಾಡಿ, ಪೌಷ್ಟಿಕ ಆಹಾರಗಳು, ಬಳಕೆ ಮತ್ತು ಅದರ ಪ್ರಯೋಜನಗಳ ಕುರಿತು ಮಾಹಿತಿ ಒದಗಿಸಿದರು. ವೇದಿಕೆಯಲ್ಲಿ ಉದ್ಯಮಿ ಉಮಾಶಂಕರ್, ಶಿವರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಸ್ವಚ್ಛತಾ ಅಭಿಯಾನ ಅಧಿಕಾರಿ ಶಿವು, ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ, ಸ್ಥಳೀಯ ಮಹಿಳಾ ಪ್ರಮುಖರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಇದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 70 ಕ್ಕೂ ಅಧಿಕ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.