ಗೋಣಿಕೊಪ್ಪ ವರದಿ, ಸೆ. 29: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಡಗಿನ ಹವ್ಯಾಸಿ ಛಾಯಾಗ್ರಾಹಕ ಚೆಟ್ಟಂಗಡ ಎ. ಸೋಮಣ್ಣ ಅವರ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ವಿನಾಶದ ಅಂಚಿನಲ್ಲಿರುವ ಮಲಬಾರ್ ಟೊರೆಂಟ್ ಟೋಡ್ ಎಂಬ ಕಪ್ಪೆಯ ಚಿತ್ರ ವನ್ಯಜೀವಿ ಪ್ರವರ್ಗ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಕೊಡಗಿನಲ್ಲಿ ವಿನಾಶದ ಅಂಚಿನಲ್ಲಿರುವ ಮಲಬಾರ್ ಟೊರೆಂಟ್ ಟೋಡ್ ಕಪ್ಪೆಯ ಚಿತ್ರವನ್ನು ಹರಿಯುವ ಜರಿಯ ಹಿನ್ನೆಲೆ ಚಿತ್ರವಾಗಿ ಕ್ಲಿಕ್ಕಿಸಿ ಸ್ಪರ್ಧೆಗೆ ನೀಡಿದ್ದರು. ತೆರಾಲು ಗ್ರಾಮದಲ್ಲಿರುವ ಬೊಳ್ಳೇರ ಫಾಲ್ಸ್‍ನಲ್ಲಿ ಇದನ್ನು ತೆಗೆಯಲಾಗಿದೆ. ದಟ್ಟಕಾಡಿನ ನಡುವೆ ಹರಿಯುವ ಜರಿಗಳ ಬದಿಯಲ್ಲಿ ಮಾತ್ರ ಕಾಣಸಿಗುವದು ಮಲಬಾರ್ ಟೊರೆಂಟ್ ಟೋಡ್ ವಿಶೇಷತೆ. ಇದರಂತೆ ಜರಿಗಳ ನಡುವೆ ಇರುವಾಗ ಚಿತ್ರ ತೆಗೆದಿರುವದರಿಂದ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ನಿಕನ್ ಡಿ. 500 ಕ್ಯಾಮೆರಾದಲ್ಲಿನ ಮಿಲ್ಕಿ ಎಫೆಕ್ಟ್ ತಂತ್ರಜ್ಞಾನದಲ್ಲಿ ತೆಗೆದ ಚಿತ್ರ ಉತ್ತಮ ಗ್ರಾಫಿಕ್‍ನಲ್ಲಿ ಕಾಣುವಂತೆ ಇದೆ.

ಈ ಕಪ್ಪೆಯು ಮರಗಳ ನೆರಳು, ಹೆಚ್ಚು ಶೀತ ಪ್ರದೇಶವನ್ನು ಅವಲಂಭಿಸಿದೆ. ಹಿಂದಿನ ಕಾಲದಲ್ಲಿ ಹೆಚ್ಚು ಕಾಣ ಸಿಗುತ್ತಿದ್ದ ಈ ಜಾತಿಯ ಕಪ್ಪೆ ವಿನಾಶದ ಅಂಚಿನಲ್ಲಿರುವದರಿಂದ ಮಾನ್ಯತೆ ದೊರೆತಂತಾಗಿದೆ.

ದೇಶದ ಬಹುತೇಕ ರಾಜ್ಯಗಳಿಂದ ಸಾಕಷ್ಟು ಛಾಯಾಗ್ರಾಹಕರು ಸ್ಪರ್ಧೆಯಲ್ಲಿದ್ದರು. ದ್ವಿತೀಯ ಬಹುಮಾನವನ್ನು ಮಹಾರಾಷ್ಟ್ರದ ಪಕ್ಷಿಯ ಚಿತ್ರ ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಕಬಿನಿ ಹಿನ್ನೀರಿನಲ್ಲಿ ಮರಿಯೊಂದಿಗಿನ ಹುಲಿಯ ಚಿತ್ರ ಪಡೆದುಕೊಂಡಿದೆ.

ವರದಿ- ಸುದ್ದಿಪುತ್ರ