ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ವೀರಾಜಪೇಟೆ, ಸೆ. 29: ಕುಕ್ಲೂರು ಗ್ರಾಮದ ಖಾಸಗಿ ಕಂಪೆನಿಯ ಉದ್ಯೋಗಕ್ಕೆ ತೆರಳುತ್ತಿದ್ದ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿ ಅರಣ್ಯದಲ್ಲಿ ತಲೆ ಮರೆಸಿಕೊಂಡಿದ್ದ ಇಲ್ಲಿನ ಹೆಗ್ಗಳ ಬಳಿಯ ಬೂದಿಮಾಳದ ಎ.ಮೊಣ್ಣಪ್ಪ ಅಲಿಯಾಸ್ ದೀಪು (40) ಎಂಬಾತ ನನ್ನು ಇಲ್ಲಿನ ನಗರ ಪೊಲೀಸರು ಇಂದು ಬೆಳಗಿನ ಜಾವ ಬಂಧಿಸಿದ್ದಾರೆ.
ಆರೋಪಿ ಮೊಣ್ಣಪ್ಪ ತಾ. 24 ರಂದು ತನ್ನ (ಕೆ.ಎ. 12 ಎ 4331) ಬಾಡಿಗೆ ಆಟೋದಲ್ಲಿ ಕುಳಿತ ಯುವತಿ ಕುಕ್ಲೂರು ಗ್ರಾಮಕ್ಕೆ ತೆರಳುವಂತೆ ಸೂಚಿಸಿದರೆ ಕೆಲವು ದೂರ ತೆರಳಿದ ನಂತರ ರಸ್ತೆಯನ್ನು ಬದಲಾಯಿಸಿ ಮಹಿಳಾ ಸಮಾಜದ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ಯುವತಿ ಸಂಶಯಗೊಂಡು ಪ್ರಯಾಣಿಸುತ್ತಿದ್ದ ಆಟೋದಿಂದ ರಸ್ತೆಗೆ ಧುಮುಕಿ ಬಿದ್ದು ಗಂಭೀರ ಸ್ವರೂಪದ ಗಾಯಗಳಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಳು. ಅಪಹರಣದ ಕುರಿತು ನಗರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಆಟೋರಿಕ್ಷಾವನ್ನು ವಶಪಡಿಸಿಕೊಂಡು ಆರೋಪಿಯ ಶೋಧನೆಯಲ್ಲಿ ತೊಡಗಿದ್ದರು. ಇಂದು ಆರೋಪಿಯನ್ನು ಹರಸಾಹಸದಿಂದ ಬಂಧಿಸಿದರು.