ಕೂಡಿಗೆ, ಸೆ. 29: ಕೂಡಿಗೆ ಗ್ರಾಮ ಪಂಚಾಯಿತಿಯ ಹೆಗ್ಗಡಳ್ಳಿ ವ್ಯಾಪ್ತಿಯ ವಾರ್ಡ್‍ಸಭೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಹೆಗ್ಗಡಳ್ಳಿಯ ಸಮುದಾಯ ಭವನದಲ್ಲಿ ನಡೆಯಿತು.

ಗ್ರಾಮಸ್ಥರು ತಮ್ಮ ತಮ್ಮ ವಾರ್ಡ್‍ನ ಸಮಸ್ಯೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಬ್ಯಾಡಗೊಟ್ಟ ಗ್ರಾಮದ ಅಣ್ಣಯ್ಯ, ಗಣೇಶ ನಮ್ಮ ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣದ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಇದುವರೆಗೂ ಯಾವದೇ ಕೆಲಸ ಮಾಡಲು ಪ್ರಾರಂಭ ಮಾಡಿಲ್ಲವೆಂದು ಆರೋಪಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಚರ್ಚಿಸಿ 14ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಕ್ರಮ ತೆಗೆದುಕೊಳ್ಳಲಾಗುವದು ಎಂದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಪನಾ, ಪುಪ್ಪ, ಜಯಶ್ರೀ, ಕಾರ್ಯದರ್ಶಿ ಶಿಲ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.