ವೀರಾಜಪೇಟೆ, ಸೆ. 28: ಬಾಳುಗೋಡುವಿನಲ್ಲಿ 2019ರಲ್ಲಿ ನಡೆಸಲು ತೀರ್ಮಾನಿಸಿದ್ದ ಕೌಟುಂಬಿಕ ಹಾಕಿ ಉತ್ಸವವನ್ನು ಮುಂದೂಡಲಾಗಿದೆ. ಇದನ್ನು 2020ರಲ್ಲಿ ಬಾಳುಗೋಡುವಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಳ್ಳೂರು ಹರಿಹರದ ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಉತ್ತಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ನಾಪೋಕ್ಲುವಿನಲ್ಲಿ ನಡೆದ ಕುಲ್ಲೇಟಿರ ಕಪ್ ಹಾಕಿ ಉತ್ಸವದಲ್ಲಿ 2019ರಲ್ಲಿ ಹಾಕಿ ಉತ್ಸವ ನಡೆಸಲು ಬೆಳ್ಳೂರು, ಹರಿಹರ ಮುಕ್ಕಾಟಿರ ಕುಟುಂಬಕ್ಕೆ ಅನುಮತಿ ನೀಡಲಾಗಿತ್ತು. ಉತ್ಸವದ ಪೂರ್ವ ತಯಾರಿಯೂ ನಡೆಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಾನಿಯಾದವರಿಗೆ ಬೆಂಬಲವಾಗಿ ಹಾಕಿ ಉತ್ಸವವನ್ನು ಮುಂದೂಡಿ 2020ಕ್ಕೆ ಬಾಳುಗೋಡುವಿನಲ್ಲಿ ನಡೆಸಲಾಗುವದು. ಸೆಪ್ಟೆಂಬರ್ 4 ರಂದು ಕೊಡವ ಹಾಕಿ ಅಕಾಡಮಿ ಸಭೆ ನಡೆಸಿ ಹಾಕಿ ಉತ್ಸವವನ್ನು 2020ಕ್ಕೆ ಮುಂದೂಡುವಂತೆ ಸೂಚನೆ ನೀಡಲಾಗಿದೆ. ಪಂದ್ಯಾಟ ನಡೆಸುವಂತೆ ಹಲವಾರು ಕುಟುಂಬಗಳು ಒತ್ತಡ ಹೇರುತ್ತಿದ್ದರೂ ಕೊಡವ ಹಾಕಿ ಅಕಾಡೆಮಿ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಹಾಕಿ ಉತ್ಸವದ ಕಾರ್ಯಾಧ್ಯಕ್ಷ ರೋಹಿತ್ ಸುಬ್ಬಯ್ಯ, ಕಾರ್ಯದರ್ಶಿ ಲಕ್ಷ್ಮಣ್, ನಿರ್ದೇಶಕ ಕನ್ನು ಉಪಸ್ಥಿತರಿದ್ದರು.