ಮಡಿಕೇರಿ, ಸೆ. 28: ಮಡಿಕೇರಿ ದಸರಾ ಸಮಿತಿಯ ಪದಾಧಿಕಾರಿಗಳು ಇಂದು ಜಿಲ್ಲೆಯ ಇಬ್ಬರು ಶಾಸಕರು ಹಾಗೂ ಮೇಲ್ಮನೆ ಸದಸ್ಯರಿಬ್ಬರನ್ನು ಭೇಟಿಯಾಗಿ ದಸರಾ ಆಚರಣೆ ಸಂಬಂಧ ಸರಕಾರದ ಅನುದಾನ ಕೋರಿಕೆ ಕುರಿತು ಚರ್ಚಿಸಿದರು. ಪ್ರಾಕೃತಿಕ ವಿಕೋಪ ಹಿನ್ನೆಲೆ ಎದುರಾಗಿರುವ ಪರಿಸ್ಥಿತಿಯ ಸಂಬಂಧ ದಸರಾ ನಾಡಹಬ್ಬ ಆಚರಿಸುವ ಕುರಿತು ಈ ವೇಳೆ ಪ್ರಸ್ತಾಪಿಸಿದ್ದು, ಹಿಂದಿನ ಸಂಪ್ರದಾಯದಂತೆ ನವರಾತ್ರಿಯ ಕರಗ ಪೂಜೆಯೊಂದಿಗೆ, ವಿಜಯ ದಶಮಿಯಂದು ದಶಮಂಟಪಗಳ ಮೆರವಣಿಗೆ ಮತ್ತು ಆಯುಧ ಪೂಜಾ ಸಂಪ್ರದಾಯದ ಆಚರಣೆ ಬಗ್ಗೆ ಚರ್ಚಿಸಲಾಗಿದೆ.
ಎಲ್ಲದಕ್ಕೂ ಅಕ್ಟೋಬರ್ 3 ರಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ವಿದೇಶದಿಂದ ಹಿಂತಿರುಗಿದ ಬಳಿಕ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಇಂಗಿತವನ್ನು ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ವ್ಯಕ್ತಪಡಿಸಿದ್ದಾಗಿ ಗೊತ್ತಾಗಿದೆ. ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪದಾಧಿಕಾರಿಗಳಾದ ಮಹೇಶ್ ಜೈನಿ, ಚುಮ್ಮಿ ದೇವಯ್ಯ, ಸಂಗೀತಾ ಪ್ರಸನ್ನ ಮೊದಲಾದವರು ಈ ವೇಳೆ ಹಾಜರಿದ್ದುದಾಗಿ ತಿಳಿದು ಬಂದಿದೆ.