ಕುಶಾಲನಗರ, ಸೆ. 28: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಬೆನ್ನಲ್ಲೇ ತಮ್ಮ ಮೂಲ ಸ್ಥಳಗಳಿಗೆ ತೆರಳಿದ್ದ ಉತ್ತರ ಭಾರತದ ಕಾರ್ಮಿಕರು ಮತ್ತೆ ಜಿಲ್ಲೆಯತ್ತ ತಂಡೋಪತಂಡವಾಗಿ ಮರಳಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ಉತ್ತರ ಭಾರತದ ಅಸ್ಸಾಂ ಮತ್ತಿತರ ರಾಜ್ಯಗಳಿಂದ ಜಿಲ್ಲೆಯ ವಿವಿಧ ಕಡೆಯ ತೋಟಗಳಿಗೆ ಕೆಲಸ ನಿರ್ವಹಿಸಲು ಸುಮಾರು 200 ಕ್ಕೂ ಅಧಿಕ ಕಾರ್ಮಿಕರು ಸರಕಾರಿ ಬಸ್ಗಳ ಮೂಲಕ ಆಗಮಿಸಿರುವದು ಗೋಚರಿಸಿದೆ. ಮೈಸೂರು ತನಕ ರೈಲುಗಳಲ್ಲಿ ಪ್ರಯಾಣಿಸಿ ಕುಶಾಲನಗರಕ್ಕೆ ಬಸ್ಗಳಲ್ಲಿ ಬಂದು ನಂತರ ಜಿಲ್ಲೆಯ ವಿವಿಧೆಡೆ ತೋಟಗಳಿಗೆ ತೆರಳುತ್ತಿದ್ದಾರೆ.
ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ವ್ಯಾಪ್ತಿಯ ನೂರಾರು ಕಾರ್ಮಿಕರು ನೆಲೆ ಕಳೆದುಕೊಂಡು ಕುಶಾಲನಗರ, ಮಡಿಕೇರಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ಕೂಲಿ ಕೆಲಸದ ಕೊರತೆ ಎದುರಿಸುತ್ತಿರುವದು ಒಂದೆಡೆಯಾದರೆ ಇದೀಗ ನೆರೆ ರಾಜ್ಯಗಳ ಕಾರ್ಮಿಕರ ತಂಡ ಆಗಮಿಸಿರುವದು ಸ್ಥಳೀಯ ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದೆ ಎನ್ನಬಹುದು.
ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಸಂದರ್ಭ ಆಗಸ್ಟ್ ತಿಂಗಳಲ್ಲಿ ನೆರೆ ರಾಜ್ಯದ ನೂರಾರು ಕಾರ್ಮಿಕರು ತಮ್ಮ ರಾಜ್ಯಕ್ಕೆ ಹಿಂತಿರುಗಿದ್ದು ಇದೀಗ ಶುಕ್ರವಾರ ಮುಂಜಾನೆ ವೇಳೆಗೆ ಕುಶಾಲನಗರ ಬಸ್ ನಿಲ್ದಾಣದಲ್ಲಿ 200 ಕ್ಕೂ ಅಧಿಕ ಮಹಿಳೆಯರು, ಪುರುಷರು ಬಂದಿಳಿದ ದೃಶ್ಯ ಕಂಡುಬಂತು. ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ನಿರ್ವಹಿಸಲು ಅವಶ್ಯಕತೆ ಯಿರುವ ಸೂಚನೆ ಮೇರೆಗೆ ಬಂದಿರುವದಾಗಿ ಅಸ್ಸಾಂ ಮೂಲದ ಕಾರ್ಮಿಕ ರೋಶಿ ಖಲಿ ಎಂಬಾತ ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ದಿನವೊಂದಕ್ಕೆ 360 ರೂಪಾಯಿ ಕೂಲಿ ದೊರಕುವ ಒಪ್ಪಂದದೊಂದಿಗೆ ತಮ್ಮ ಕಾರ್ಮಿಕರು ಬಂದಿರುವದಾಗಿ ಮಾಹಿತಿ ನೀಡಿದ್ದು, ಜಿಲ್ಲೆಯ ಸಿದ್ದಾಪುರ, ಮಡಿಕೇರಿ ಮುಂತಾದೆಡೆ ಗಳ ತೋಟಗಳಲ್ಲಿ ಕೆಲಸ ನಿರ್ವಹಿಸಲು ತೆರಳುತ್ತಿರುವದಾಗಿ ತಿಳಿಸಿದ್ದಾರೆ.