ಶ್ರೀಮಂಗಲ, ಸೆ. 28: ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಾರ್ಷಿಕ ರೂ. 30.30 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ 12ರಂತೆ ಡಿವಿಡೆಂಡ್ ನೀಡಲಾಗುವದೆಂದು ಸಂಘದ ಅಧ್ಯಕ್ಷ ಕೆ.ಎಂ.ಸಂದೀಪ್ ಸಭೆಯಲ್ಲಿ ಮಾಹಿತಿ ನೀಡಿದರು.

ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಈ ವಿಚಾರವನ್ನು ತಿಳಿಸಿದರು. ಇದಲ್ಲದೆ, ಕೊಡಗಿನಲ್ಲಿ ಸುರಿದ ಮಹಾಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸಂಘದ ಸಾಮೂಹಿಕ ಪ್ರಯೋಜನ ನಿಧಿಯಿಂದ ರೂ. 2 ಲಕ್ಷವನ್ನು ಪರಿಹಾರ ನಿಧಿಗೆ ನೀಡುವಂತೆ ಮಹಾಸಭೆಯ ನಿರ್ಣಯ ಕೈಗೊಳ್ಳಲಾಯಿತು. ಸಂಘ ಸದಸ್ಯರ ಮಕ್ಕಳು ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದವರಿಗೆ ಸಂಘದ ವತಿಯಿಂದ ಪ್ರೋತ್ಸಾಹ ದನ ನೀಡುವದು. ಈ ಸಂಬಂಧ ಸದಸ್ಯರ ಮಕ್ಕಳು ಸಂಘದ ಕಚೇರಿ ಸಮಯದಲ್ಲಿ ತಮ್ಮ ಅಂಕಪಟ್ಟಿಯ ನಕಲು ಪಟ್ಟಿಯನ್ನು ನೀಡಿದಲ್ಲಿ ಪ್ರೋತ್ಸಾಹದನ ವಿತರಿಸಲಾಗುವದೆಂದು ಸಂಘದ ಅಧ್ಯಕ್ಷ ಸಂದೀಪ್ ಅವರು ವಿವರಿಸಿದರು.

ಸಂಘದ ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಬಿ. ಯತಿರಾಜ್ ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ಕೆ.ಚಂಗಪ್ಪ (ರಂಜಿ), ನಿರ್ದೇಶಕರುಗಳಾದ ಅಜ್ಜಮಾಡ ಚಂಗಪ್ಪ, ಕಾಳಿಮಾಡ ಪ್ರಶಾಂತ್, ಐಯಮಾಡ ಉದಯ, ಅರೆಯಡ ಬೊಳ್ಳಮ್ಮ, ಸಿ.ಕೆ.ಗೀತಾ, ಹೆಚ್.ಎಸ್.ಕೇತು, ಮೇಲ್ವಿಚಾರಕರಾದ ಬಿ.ಜೆ.ಇಂದ್ರೇಶ್ ಮತ್ತಿತರರು ಹಾಜರಿದ್ದರು.