ಸುಂಟಿಕೊಪ್ಪ, ಸೆ. 28: ಸುಂಟಿಕೊಪ್ಪ ಹೋಬಳಿ ಮಟ್ಟದ ಜನ ಸ್ಪಂದನ ಸಭೆಯು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು,ಮಳೆಹಾನಿ ಸಂತ್ರಸ್ತರು, ನೊಂದ ರೈತರಿಂದ ಅಹವಾಲುಗಳ ಮಹಾಪೂರವೆ ಹರಿದು ಬಂತು.ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಆಯೋಜಿಸಲಾದ ಪ್ರಥಮ ಜನಸ್ಪಂದನ ಸಭೆಯಲ್ಲಿ ಬಾರೀ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿಗಳಿಗೆ ನೊಂದವರು ಅರ್ಜಿಸಲ್ಲಿಸಲು ಮುಗಿಬಿದ್ದರು. ಅತಿವೃಷ್ಟಿಯಿಂದ ಮನೆ ಸಂಪೂರ್ಣ ಬಿದ್ದು ಹೋಗಿದೆ.ನಾಟಿ ಮಾಡಿದ ಗದ್ದೆ ತೋಟ ಗುಡ್ಡ ಕುಸಿತದಿಂದ ಮಣ್ಣು ಪಾಲಾಗಿದೆ ರಸ್ತೆ ಇಲ್ಲದೆ ಊರಿಗೆ ಸಂಪರ್ಕವಿಲ್ಲದಾಗಿದೆ ಮುಂದೆ ಜೀವನ ಸಾಗಿಸಲೇ ಕಷ್ಟವಾಗಿದೆ ಎಂದು ಸಂತ್ರಸ್ತರು ಆಳಲು ತೋಡಿಕೊಂಡು ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಮಂಗಳವಾರ ಹಾಗೂ ಶುಕ್ರವಾರ (ಮೊದಲ ಪುಟದಿಂದ) ಜನಸ್ಪಂದನ ಸಭೆ ನಡಸಲಾಗುವದು. ಹೋಬಳಿ ಮಟ್ಟದ ಜನರ ಕುಂದು ಕೊರತೆ ಆಲಿಸಿ ಅರ್ಜಿ ಪಡೆದು ಅದನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ಮನೆ, ಭೂಮಿ, ತೋಟ ಗದ್ದೆ Pಳೆದುಕೊಂಡವರಿಗೆ ಸರಕಾರದ ಮಾನದಂಡದ ಅನುಸಾರ ಪರಿಹಾರ ಸಿಗಲಿದೆ. ಈಗಾಗಲೇ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ನೀಡುತ್ತಿದ್ದಾರೆ. ಕೃಷಿ ಇಲಾಖೆಯ ಸರ್ವೆ ಕಾರ್ಯವಾಗಿದ್ದು, ಸರಕಾರಕ್ಕೆ ವರದಿ ನೀಡಲಿದ್ದೇವೆ. ಜಿಯೋಲಾ ಜಿಕಲ್ ಸರ್ವೆ ಆಫ್ ಇಂಡಿಯಾ ದವರು ಸರ್ವೆ ನಡೆಸುತ್ತಿದ್ದು, ಜಲಪ್ರಳಯ ಭೂಕುಸಿತಕ್ಕೆ ಒಳಗಾದ ಸ್ಥಳದಲ್ಲಿ ಮನೆ ನಿರ್ಮಿಸಲು ಸಾಧ್ಯವೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಹಾಲೇರಿ ಕಡಂದಾಳು ಗ್ರಾಮದ ಚೋಂದಕ್ಕಿ ಅವರು ತಮ್ಮ ಮನೆ ಹಾನಿಯಾಗಿದ್ದು, ನಾಟಿ ಮಾಡಿದ ಗದ್ದೆ ಸಂಪೂರ್ಣ ಮಣ್ಣು ಪಾಲಾಗಿದೆ ಎಂದು ಮನವಿ ನೀಡಿದರೆ ಅದೇ ಗ್ರಾಮದ ಮುದ್ದೂರ ಅಯ್ಯಪ್ಪ ಉತ್ತಪ್ಪ ತಿಮ್ಮಯ್ಯ ಬಿದ್ದಪ್ಪ ಗಣಪತಿ ಸಹ ರಸ್ತೆ ಇಲ್ಲ ಗದ್ದೆ ಮಣ್ಣು ಪಾಲಾಗಿದೆ ಎಂದೂ ಅವಾಹಲೂ ನೀಡಿದರು.

ಸುಂಟಿಕೊಪ್ಪ ಎಂ.ಎ. ವಸಂತ ಅವರ ಜಮ್ಮಾ ಆಸ್ತಿಯು ಜಂಟಿಯಾಗಿರುವದರಿಂದ ಹಲವರು ವಿಧಿವಶರಾಗಿದ್ದಾರೆ. ಇನ್ನೂ ಕೆಲವರ ಮಾಹಿತಿ ಇಲ್ಲ. ಆದುದರಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವದು ಕಷ್ಟವಾಗಿದೆ ಇದನ್ನು ಸರಿಪಡಿಸಿಕೊಡಿ ಎಂದರು.

ಮಾದಾಪುರ ಗ್ರಾಮ ಪಂಚಾಯಿತಿ ಜಂಬೂರು ಬಾಣೆ ನಿವಾಸಿ ಕಂಠಿ ನಾಣಿಯಪ್ಪ ಅವರು ಕುಡಿಯುವ ನೀರು ಕಲುಷಿತಗೊಂಡಿದೆ ಕಳೆದ 3 ತಿಂಗಳಿನಿಂದ ಕಲ್ಮಷ ನೀರನ್ನು ಪಂಚಾಯಿತಿಯವರು ನೀಡುತ್ತಿದ್ದಾರೆ. ಗ್ರಾಮ ಸಭೆಯಲ್ಲೂ ಪ್ರಸ್ತಾಪಿಸಿದರೂ ಪ್ರಯೋಜನವಾಗಲಿಲ್ಲ 350 ಮನೆ 1500 ಮಂದಿ ಇರುವಲ್ಲಿಗೆ ಕಲುಷಿತ ನೀರು ಕೊಡುತ್ತಿದ್ದಾರೆ ಎಂದು ಬಾಟಲಿಯಲ್ಲಿ ತುಂಬಿಸಿದ ಕಲುಷಿತ ಕುಡಿಯುವ ನೀರನ್ನು ಪ್ರದರ್ಶಿಸಿದರು.

ಜಿಲ್ಲಾಧಿಕಾರಿ ವಿದ್ಯಾ ಕೂಡಲೇ ಈ ಬಗ್ಗೆ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಅಧಿಕಾರಿಗಳುಉ ಪರಿಶೀಲಿಸಿ ಶುದ್ಧೀಕರಿಸಿದ ನೀರು ಸರಬರಾಜು ಮಾಡದಿದ್ದರೆ ಪಂಚಾಯಿತಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲಾಗುವದೆಂದರು.

ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣರೈ ತಾ.ಪಂ.ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಕುಮುಧಾ ಧರ್ಮಪ್ಪ, ಪಿ.ಎಂ.ಲತೀಫ್, ಸುನೀತಾ, ಚೆಟ್ಟಳ್ಳಿ ತಾ.ಪಂ.ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಬ್ಬಾಸ್, 7ನೇ ಹೊಸಕೋಟೆ ಗ್ರಾ.ಪಂ.ಉಪಾಧ್ಯಕ್ಷ ಮುಸ್ತಾಫ, ಅವರು ಮನೆ ಜಮೀನು ಕಳಕೊಂಡವರಿಗೆ ಮನೆ ನಿರ್ಮಾಣ ಹಾಗೂ ಜಮೀನಿಗೆ ಪರಿಹಾರ ನೀಡಬೇಕು. ರೈತರ ಎಲ್ಲಾ ತರಹದ ಸಾಲ ಮನ್ನಾ ಮಾಡಬೇಕು ಕಾಫಿ, ಕರಿಮೆಣಸು, ಶುಂಠಿ ಅಡಿಕೆ ಬಾಳೆ ನಷ್ಟದ ಪರಿಹಾರ ದೊರೆಯಬೇಕು ನಿರಾಶ್ರಿತರಲ್ಲಿ ದಾಖಲೆ ಇಲ್ಲದವರಿಗೂ ಪರಿಹಾರ ನೀಡಬೇಕು ನಿರಾಶ್ರಿತರ ಹೆಸರಿನಲ್ಲಿ ಬಾಂಗ್ಲಾ ದೇಶದ ವಲಸಿಗರಿಗೆ ನೆರವು ನೀಡಬಾರದೆಂದು ಮನವಿ ನೀಡಿದರು.

ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಮಹೇಶ್, ಸೋಮವಾರಪೇಟೆ ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುನಿಲ್ ಕುಮಾರ್ ವಿವಿಧ ಇಲಾಖಾಧಿ ಕಾರಿಗಳು ಉಪಸ್ಥಿತರಿದ್ದರು.

ಮೂವತ್ತೋಕ್ಲು ನಿರಾಶ್ರಿತರಿಗೆ ಸರಕಾರದಿಂದ ಬರುವ ಪರಿಹಾರ ಮೊತ್ತ 3800 ರೂ ಸಿಗಲಿಲ್ಲ ಹಟ್ಟಿಹೊಳೆಯಲ್ಲಿ ಕಾರ್ಯಾ ಚರಿಸುತ್ತಿದ್ದ ನಿರ್ಮಲಾ ವಿದ್ಯಾ ಸಂಸ್ಥೆಯನ್ನು ಸುಂಟಿಕೊಪ್ಪಕ್ಕೆ ಸ್ಥಳಾಂತರಿಸಲಾಗಿದೆ ಇದರಿಂದ ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಬಹಳ ಸಮಸ್ಯೆ ಎದುರಾಗಿದ್ದು, ಆ ಶಾಲೆಯನ್ನು ಹಟ್ಟಿಹೊಳೆಯಲ್ಲಿಯೇ ಪುನಾರಂಭಿಸ ಬೇಕು ಗ್ರಾಮಕ್ಕೆ ಮಿನಿ ಸಾರಿಗೆ ಸಂಪರ್ಕವನ್ನು ಕಲ್ಪಿಸಿಕೊಂಡು ವಂತೆ ಸಂತ್ರಸ್ತ ಗಣೇಶ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ವಿಮಲಾವತಿ, ಹರದೂರು ತಾ.ಪಂ. ಸದಸ್ಯೆ ಮಣಿ, ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.